ಉತ್ತರ ಪ್ರದೇಶ: ಮಸೀದಿಗೆ ಹೋಗಿದ್ದ ಹಿಂದೂ ವ್ಯಾಪಾರಿ

ಅಲಿಗಢ: ಹಿಂದೂ ಸಮುದಾಯಕ್ಕೆ ಸೇರಿದ ವ್ಯಾಪಾರಿಯೋರ್ವರು ಸ್ಥಳೀಯ ಮಸೀದಿಯ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದಕ್ಕೆ ಬಲಪಂಥೀಯ ಸಂಘಟನೆಯೊಂದು ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಶುದ್ಧೀಕರಣಕ್ಕೆ ಒಳಗಾಗುವಂತೆ ಆಗ್ರಹಿಸಿದೆ.
ವ್ಯಾಪಾರಿ ಸುನೀಲ್ ರಜನಿ ಅವರು ಹಲವು ಸಮುದಾಯಗಳು ಇರುವ ಮಾಮೂ ಭಂಜಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಮುಸ್ಲಿಂ ನೆರೆಯವರೊಂದಿಗೆ ಗುರುವಾರ ಸಂಜೆ ನಮಾಜ್ ಮಾಡಿರುವ ವೀಡಿಯೊ ವೈರಲ್ ಆಗಿತ್ತು.
‘‘ರಜನಿ ಅವರ ನಮಾಜು ಮಾಡಿರುವುದನ್ನು ಧರ್ಮ ನಿಂದನೆ ಎಂದು ಪರಿಗಣಿಸಲಾಗಿದೆ. ಅವರು ಸಾರ್ವಜನಿಕ ಕ್ಷಮೆ ಕೋರಬೇಕು’’ ಎಂದು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ)ದ ಸ್ಥಳೀಯ ನಾಯಕ ಮೋನು ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಲ್ಲದೆ, ರಜನಿ ದೇವಾಲಯದಲ್ಲಿ ‘‘ಶುದ್ಧೀಕರಣ’’ಕ್ಕೆ ಒಳಗಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಸೀದಿಯಿಂದ ಹೊರಬರುತ್ತಲೇ ರಜನಿ ಅವರಿಗೆ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯರು ಎದುರಾದರು. ಇದು ಪ್ರಚೋದನೆಯಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಗಂಗಾಜಲ ಪ್ರೋಕ್ಷಿಸಿಕೊಂಡು ಕೂಡಲೇ ಶುದ್ಧೀಕರಣಗೊಳ್ಳುವಂತೆ ಅವರು ಸೂಚಿಸಿದರು.
ಈ ವಿಷಯದ ಕುರಿತಂತೆ ಇದುವರೆಗೆ ಔಪಚಾರಿಕ ದೂರು ದಾಖಲಾಗಿಲ್ಲ.