ಕಂಗನಾಗೆ ರಕ್ಷಣೆ ಒದಗಿಸಿದ್ದಂತೆಯೇ ಕುನಾಲ್ ಕಾಮ್ರಾಗೂ ಕೇಂದ್ರ ಸರಕಾರ ರಕ್ಷಣೆ ಒದಗಿಸಬೇಕು: ಸಂಜಯ್ ರಾವತ್ ಆಗ್ರಹ

ಸಂಜಯ್ ರಾವತ್ (Photo: X/@PTI_News)
ಮುಂಬೈ: 2020ರಲ್ಲಿ ನಟಿ ಕಂಗನಾ ರಣಾವತ್‌ಗೆ ರಕ್ಷಣೆ ಒದಗಿಸಿದ್ದಂತೆಯೇ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ವಿಡಂಬಿಸಿದ್ದಕ್ಕಾಗಿ ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರ ಆಕ್ರೋಶ ಹಾಗೂ ಪೊಲೀಸ್ ತನಿಖೆಯನ್ನು ಎದುರಿಸುತ್ತಿರುವ ಕಾಮಿಡಿಯನ್ ಕುನಾಲ್ ಕಾಮ್ರಾಗೂ ಕೇಂದ್ರ ಸರಕಾರ ರಕ್ಷಣೆ ಒದಗಿಸಬೇಕು ಎಂದು ಶನಿವಾರ ಶಿವಸೇನೆ (ಉದ್ದವ್ ಬಣ) ಸಂಸದ ಸಂಜಯ್ ರಾವತ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, "ಪೊಲೀಸರೆದುರು ತಮ್ಮ ಹೇಳಿಕೆ ದಾಖಲಿಸಲು ಕಾಮ್ರಾ ಮುಂಬೈಗೆ ಬರಬೇಕು. ಈ ಹಿಂದೆ ನಾವು ದಾಳಿ ನಡೆಸಬಹುದು ಎಂಬ ಭೀತಿಯಿಂದ ನಟಿ ಕಂಗನಾ ರಣಾವತ್ ಗೆ ಕೇಂದ್ರ ಸರಕಾರ ರಕ್ಷಣೆ ಒದಗಿಸಿತ್ತು. ಕುನಾಲ್ ಕಾಮ್ರಾಗೂ ಅದೇ ರೀತಿಯ ವಿಶೇಷ ರಕ್ಷಣೆ ದೊರೆಯಬೇಕು ಎಂದು ನಾನು ಆಗ್ರಹಿಸುತ್ತೇನೆ" ಎಂದು ಹೇಳಿದರು.
ಇದೇ ವೇಳೆ ಗುಜರಾತ್ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ವಿರುದ್ಧ ಗುಜರಾತ್ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಕ್ರಮವನ್ನು ಸ್ವಾಗತಿಸಿದ ಸಂಜಯ್ ರಾವತ್, ಕುನಾಲ್ ಕಾಮ್ರಾ ಕೂಡಾ ಇಮ್ರಾನ್ ಪ್ರತಾಪ್‌ಗಢಿಯಂತೆ ಕಲಾವಿದ, ಕವಿ ಹಾಗೂ ವಿಡಂಬನಾಕಾರರಾಗಿದ್ದಾರೆ ಎಂದು ತಿಳಿಸಿದರು.
ಶಿವಸೇನೆ (ಶಿಂದೆ ಬಣ) ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ವಿಶ್ವಾಸ ದ್ರೋಹಿ ಎಂದು ವಿಡಂಬಿಸಿದ್ದಕ್ಕಾಗಿ ಕುನಾಲ್ ಕಾಮ್ರಾ ವಿರುದ್ಧ ಹಲವು ಎಫ್ಐಆರ್‌ಗಳು ದಾಖಲಾಗಿದ್ದು, ಈ ವಿಡಂಬನೆಯಿಂದ ಆಕ್ರೋಶಗೊಂಡ ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರು, ಕಳೆದ ರವಿವಾರ ಅವರು ಕಾರ್ಯಕ್ರಮ ನೀಡಿದ್ದ ಸ್ಟುಡಿಯೊವನ್ನು ಧ್ವಂಸಗೊಳಿಸಿದ್ದರು.