ದಲ್ಲೇವಾಲ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿಲ್ಲ: ಸ್ಪಷ್ಟನೆ ನೀಡಿದ ರೈತ ಮುಖಂಡ

Photo credit: PTI
ಹೊಸದಿಲ್ಲಿ : ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿಲ್ಲ ಎಂದು ರೈತ ಮುಖಂಡ ಅಭಿಮನ್ಯು ಕೋಹರ್ ಶನಿವಾರ ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಕೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್, ಶುಕ್ರವಾರ ಬೆಳಗ್ಗೆ ನೀರು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ ಎಂದು ಪಂಜಾಬ್ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಖನೌರಿ ಹಾಗೂ ಶಂಭು ಗಡಿಗಳ ಬಳಿ ಪ್ರತಿಭಟಿಸುತ್ತಿದ್ದ ಎಲ್ಲ ರೈತರನ್ನು ಅಲ್ಲಿಂದ ಚದುರಿಸಲಾಗಿದೆ. ಎಲ್ಲ ಮುಚ್ಚಿದ್ದ ರಸ್ತೆಗಳು ಹಾಗೂ ಹೆದ್ದಾರಿಗಳನ್ನು ತೆರೆಯಲಾಗಿದೆ ಎಂದು ಪಂಜಾಬ್ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಅಭಿಮನ್ಯು ಕೋಹರ್, ದಲ್ಲೇವಾಲ್ ಅವರು ಎಲ್ಲಾ ರೈತರನ್ನು ಬಿಡುಗಡೆ ಮಾಡಿದ ನಂತರವೇ ನೀರು ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ರೈತ ಮುಖಂಡರನ್ನು ಬಿಡುಗಡೆಗೊಳಿಸಿದ ನಂತರ ಅವರು ಒಂದು ಲೋಟ ನೀರು ಕುಡಿದರು. ಆದರೆ ದಲ್ಲೇವಾಲ್ ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ ಎಂಬುವುದು ತಪ್ಪು ಮಾಹಿತಿಯಾಗಿದೆ. ಅವರು ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ ಎಂದು ಹೇಳಿದರು.