ಭೀಕರ ಭೂಕಂಪ: ಮ್ಯಾನ್ಮಾರ್ ನಲ್ಲಿ ಸಾವಿರ ದಾಟಿದ ಸಾವುಗಳ ಸಂಖ್ಯೆ

Photo | X
ಹೊಸದಿಲ್ಲಿ: ಭೂಕಂಪ ಪೀಡಿತ ನೆರೆಯ ಮ್ಯಾನ್ಮಾರ್ ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ನೆರವು ನೀಡುವ ಪ್ರಯತ್ನಗಳನ್ನು ತೀವ್ರಗೊಳಿಸಿರುವ ಭಾರತವು ‘ಆಪರೇಷನ್ ಬ್ರಹ್ಮ’ದ ಅಂಗವಾಗಿ ಎನ್‌ಡಿಆರ್‌ಎಫ್‌ನ 80 ಸಿಬ್ಬಂದಿಗಳನ್ನು ಮತ್ತು 15 ಟನ್ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ನೆರೆಯ ದೇಶಕ್ಕೆ ಭಾರತೀಯ ನೌಕಾಪಡೆಯ ಎರಡು ನೌಕೆಗಳನ್ನೂ ಕಳುಹಿಸಲಾಗಿದ್ದು, 118 ವೈದ್ಯಕೀಯ ಸಿಬ್ಬಂದಿಗಳನ್ನು ಹೊಂದಿರುವ ಒಂದು ಕ್ಷೇತ್ರ ಆಸ್ಪತ್ರೆ (ಫೀಲ್ಡ್ ಹಾಸ್ಪಿಟಲ್)ಯನ್ನು ವಿಮಾನದ ಮೂಲಕ ರವಾನಿಸಲಾಗಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಮ್ಯಾನ್ಮಾರ್ ನ ಮಿಲಿಟರಿ ನೇತೃತ್ವದ ಆಡಳಿತದ ಮುಖ್ಯಸ್ಥ ಮಿನ್ ಆಂಗ್ ಲಾಂಯ್ಗ್ ಅವರೊಂದಿಗೆ ಮಾತನಾಡಿ, ಭಾರೀ ಭೂಕಂಪದಿಂದ ಸಂಭವಿಸಿರುವ ವಿನಾಶವನ್ನು ನಿರ್ವಹಿಸುವಲ್ಲಿ ಭಾರತವು ಮ್ಯಾನ್ಮಾರ್ ನ ಜೊತೆಯಾಗಿ ನಿಂತಿದೆ ಎಂದು ತಿಳಿಸಿದರು.
‘ಮ್ಯಾನ್ಮಾರ್ ನ ಹಿರಿಯ ಜನರಲ್ ಮಿನ್ ಆಂಗ್ ಲಾಂಯ್ಗ್ ಅವರೊಡನೆ ಮಾತನಾಡಿ, ವಿನಾಶಕಾರಿ ಭೂಕಂಪದಲ್ಲಿ ಜೀವಹಾನಿಗೆ ನಮ್ಮ ಗಾಢವಾದ ಸಂತಾಪವನ್ನು ವ್ಯಕ್ತಪಡಿಸಿದ್ದೇನೆ. ಆಪ್ತ ಮಿತ್ರ ಮತ್ತು ನೆರೆಯ ದೇಶವಾಗಿ ಈ ಕಷ್ಟದ ಸಮಯದಲ್ಲಿ ಭಾರತವು ಮ್ಯಾನ್ಮಾರ್ ನ ಜನತೆಯೊಂದಿಗೆ ಒಗ್ಗಟ್ಟಿನೊಂದಿಗೆ ನಿಲ್ಲುತ್ತದೆ ’ ಎಂದು ಮೋದಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
‘ಆಪರೇಷನ್ ಬ್ರಹ್ಮ’ದ ಭಾಗವಾಗಿ ಭಾರತವು ಪೀಡಿತ ಪ್ರದೇಶಗಳಿಗೆ ವಿಪತ್ತು ಪರಿಹಾರ ಸಾಮಗ್ರಿಗಳು, ಮಾನವೀಯ ನೆರವು, ಶೋಧ ಮತ್ತು ರಕ್ಷಣಾ ತಂಡಗಳನ್ನು ರವಾನಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.
80 ಎನ್ ಡಿ ಆರ್ ಎಫ್ ಸಿಬ್ಬಂದಿಗಳ ತಂಡವನ್ನು ಘಾಝಿಯಾಬಾದ್ ನ ಹಿಂಡನ್ ನಿಂದ ಎರಡು ವಾಯುಪಡೆ ವಿಮಾನಗಳಲ್ಲಿ ರವಾನಿಸಲಾಗಿದ್ದು, ಅದು ಶನಿವಾರ ಸಂಜೆ ಮ್ಯಾನ್ಮಾರ್ ತಲುಪಿದೆ. ಎನ್ ಡಿ ಆರ್ ಎಫ್ ತಂಡವು ಕಾಂಕ್ರೀಟ್ ಕಟರ್‌ಗಳು, ಡ್ರಿಲ್ ಯಂತ್ರಗಳು,ಹ್ಯಾಮರ್‌ಗಳಂತಹ ಭೂಕಂಪ ರಕ್ಷಣಾ ಉಪಕರಣಗಳನ್ನು ತನ್ನೊಂದಿಗೆ ಒಯ್ದಿದೆ ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಗಾಝಿಯಾಬಾದ್‌ನ 8ನೇ ಎನ್ ಡಿ ಆರ್ ಎಫ್ ಬಟಾಲಿಯನ್ ನ ಕಮಾಂಡಂಟ್ ಪಿ.ಕೆ.ತಿವಾರಿ ರಕ್ಷಣಾ ತಂಡದ ನೇತೃತ್ವವನ್ನು ವಹಿಸಿದ್ದಾರೆ. ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿ ಶೋಧಕ್ಕಾಗಿ ರಕ್ಷಣಾ ಶ್ವಾನಗಳನ್ನೂ ಎನ್ ಡಿ ಆರ್ ಎಫ್ ತಂಡವು ತನ್ನೊಂದಿಗೆ ಒಯ್ದಿದೆ.
ಶುಕ್ರವಾರ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಗಳನ್ನು ನಡುಗಿಸಿದ ಭೀಕರ ಭೂಕಂಪದಲ್ಲಿ ಮೃತರ ಸಂಖ್ಯೆ ಶನಿವಾರ ಸಾವಿರವನ್ನು ದಾಟಿದ್ದು, 2,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಬದುಕುಳಿದವರನ್ನು ಶೋಧಿಸಲು ರಕ್ಷಣಾ ತಂಡಗಳು ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳ ರಾಶಿಗಳನ್ನು ಅಗೆಯುತ್ತಿದ್ದಾರೆ.
ಈ ನಡುವೆ ಮ್ಯಾನ್ಮಾರ್ ನ ಮಿಲಿಟರಿ ಆಡಳಿತವು ಕನಿಷ್ಠ 1,002 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 2,400 ಜನರು ಗಾಯಗೊಂಡಿದ್ದಾರೆ. ಅತ್ತ ಥೈಲ್ಯಾಂಡ್ ನಲ್ಲಿ ಇನ್ನೂ ಹತ್ತು ಸಾವುಗಳು ದೃಢಪಟ್ಟಿವೆ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ಸಂವಹನ ವ್ಯವಸ್ಥೆ ಪೂರ್ಣವಾಗಿ ವ್ಯತ್ಯಯಗೊಂಡಿರುವುದರಿಂದ ಮ್ಯಾನ್ಮಾರ್ ನಲ್ಲಿ ಸಂಭವಿಸಿರುವ ವಿನಾಶದ ನಿಜವಾದ ಪ್ರಮಾಣದ ವಿವರಗಳು ಈಗಷ್ಟೇ ಹೊರಬರುತ್ತಿವೆ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚುವ ಸಾಧ್ಯತೆಯಿದೆ.