ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ರೂ. 29 ಲಕ್ಷ ಪರಿಹಾರ!

ಸಾಂದರ್ಭಿಕ ಚಿತ್ರ | PC : freepik.com
ಥಾಣೆ: ದಕ್ಷಿಣ ಮುಂಬೈನಲ್ಲಿ 2018ರಲ್ಲಿ ನಡೆದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಗೆ 29.4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮೋಟರ್ ಆ್ಯಕ್ಸಿಡೆಂಟ್ ಕ್ಲೇಮ್ ಟ್ರಿಬ್ಯೂನಲ್ (ಎಂಎಸಿಟಿ) ಆದೇಶ ನೀಡಿದೆ. ವಿಮಾ ಕಂಪನಿ ಮತ್ತು ಟ್ರಾವೆಲ್ ಕಂಪನಿ ಈ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ. ವಿಮಾ ಕಂಪನಿ ತನ್ನ ಪಾಲಿನ ಮೊತ್ತವನ್ನು ಬಸ್ ಮಾಲೀಕರಿಂದ ವಸೂಲಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಹೊಸ ವರ್ಷದ ಮುನ್ನಾ ದಿನವನ್ನು ಸಂಭ್ರಮಿಸಲು ಈ ಮಹಿಳೆ ಹಾಗೂ ಆಕೆಯ ಸ್ನೇಹಿತರು ಟ್ರಾವೆಲ್ ಕಂಪನಿಯೊಂದರಿಂದ ಬಸ್ ಬಾಡಿಗೆಗೆ ಪಡೆದಿದ್ದರು. ಮರುದಿನ ಮುಂಜಾನೆ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಕಟ್ಟಡವೊಂದರ ಗೇಟಿಗೆ ಡಿಕ್ಕಿ ಹೊಡೆಸಿದ್ದ. ತೀವ್ರವಾಗಿ ಗಾಯಗೊಂಡ ಮಹಿಳೆಗೆ ಸುಧೀರ್ಘ ಚಿಕಿತ್ಸೆ ನೀಡಬೇಕಾಯಿತು. ಚಾಲಕನ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿತ್ತು. ಮೋಟಾರು ವಾಹನಗಳ ಕಾಯ್ದೆಯಡಿ 54 ಲಕ್ಷ ರೂಪಾಯಿ ಪರಿಹಾರ ಕೋರಿ ಮಹಿಳೆ ದಾವೆ ಹೂಡಿದ್ದರು. ಅಪಘಾತ ನಡೆದ ವೇಳೆ ತನ್ನ ಮಾಸಿಕ ವೇತನ 85,088 ರೂಪಾಯಿ ಆಗಿತ್ತು ಎಂದು ಮಹಿಳೆ ವಾದಿಸಿದ್ದರು.
ಬಸ್ ಮಾಲೀಕ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ ಏಕಪಕ್ಷೀಯವಾಗಿ ಪ್ರಕರಣದ ವಿಚಾರಣೆ ಮುಂದುವರಿಸಲಾಗಿತ್ತು. ಚಾಲಕನಿಗೆ ಚಾಲನಾ ಪರವಾನಗಿ ಇರಲಿಲ್ಲ ಅಥವಾ ಬಸ್ಸಿಗೆ ಅಧಿಕೃತ ಫಿಟ್ನೆಸ್ ಸರ್ಟಿಫಿಕೇಟ್ ಅಥವಾ ರೂಟ್ ಪರ್ಮಿಟ್ ಇರಲಿಲ್ಲ. ಜತೆಗೆ ಈ ಗಾಯದಿಂದ ಕಾಯಂ ಅಂಗವೈಕಲ್ಯ ಸಂಭವಿಸಿರಲಿಲ್ಲ ಎಂದು ವಿಮಾ ಕಂಪನಿ ವಾದಿಸಿತ್ತು.
ಅಂಗವೈಕಲ್ಯ ಪ್ರಮಾಣಪತ್ರದಲ್ಲಿ ಶೇಕಡ 30ರಷ್ಟು ಕಾಯಂ ಭಾಗಶಃ ಅಂಗವೈಕಲ್ಯ ಇರುವುದನ್ನು ಸೂಚಿಸಲಾಗಿತ್ತು. ಆದರೆ ಎಂಎಸಿಟಿ ಇದನ್ನು ಶೇಕಡ 20ಕ್ಕೆ ಕಡಿತಗೊಳಿಸಿದ್ದು, ಇದು ಕೇವಲ ಮೊಣಕಾಲು ಹಾಗೂ ಈಲಿಗೆ ಸಂಬಂಧಿಸಿದ್ದು, ಇಡೀ ದೇಹಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದೆ.