ಸಂಸತ್ ಸಂಕೀರ್ಣದ ಮೇಲೆ ನಾವು ಹಕ್ಕು ಮಂಡಿಸಿದ್ದೆವು ಎಂಬ ಸರಕಾರದ ಹೇಳಿಕೆ ಬಗ್ಗೆ ನಮಗೆ ತಿಳಿದಿಲ್ಲ: ದಿಲ್ಲಿ ವಕ್ಫ್ ಮಂಡಳಿ

ಕಿರಣ್ ರಿಜಿಜು (PTI)
ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ವಕ್ಫ್ ಮಸೂದೆ ಮೇಲೆ ಚರ್ಚೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ,ದಿಲ್ಲಿ ವಕ್ಫ್ ಮಂಡಳಿಯು ಸಂಸತ್ ಸಂಕೀರ್ಣ ಸೇರಿದಂತೆ ಹಲವಾರು ಕಟ್ಟಡಗಳ ಮೇಲೆ ಹಕ್ಕು ಮಂಡಿಸಿತ್ತು ಎಂಬ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿದ ಮಂಡಳಿಯ ಸಿಇಒ ಅಜಿಮುಲ್ ಹಕ್ ಅವರು,ಈ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಇದನ್ನು ತಾನು ಪರಿಶೀಲಿಸಬೇಕಿದೆ ಎಂದು ಹೇಳಿದರು. ಸಚಿವರ ಹೇಳಿಕೆ ನಿಜವಲ್ಲ ಎಂದು ಮಂಡಳಿಯ ಮತ್ತೋರ್ವ ಅಧಿಕಾರಿ ಪ್ರತಿಪಾದಿಸಿದರು.
ಲೋಕಸಭೆಯಲ್ಲಿ ವಕ್ಫ್ ಮಸೂದೆ ಮೇಲೆ ಚರ್ಚೆಯನ್ನಾರಂಭಿಸಿದ ರಿಜಿಜು,ದಿಲ್ಲಿಯಲ್ಲಿ 1970ರಿಂದಲೂ ಪ್ರಕರಣವೊಂದು ನಡೆಯುತ್ತಿದೆ. ದಿಲ್ಲಿ ವಕ್ಫ್ ಮಂಡಳಿಯು ಕೇಂದ್ರ ಸರಕಾರಿ ಕಚೇರಿಗಳ ಸಂಕೀರ್ಣ ಮತ್ತು ಸಂಸತ್ ಕಟ್ಟಡ ಸೇರಿದಂತೆ ಹಲವಾರು ಆಸ್ತಿಗಳ ಮೇಲೆ ಹಕ್ಕು ಮಂಡಿಸಿತ್ತು. ಈ ವಿಷಯವು ವಿಚಾರಣಾಧೀನವಾಗಿದ್ದಾಗ ಆಗಿನ ಯುಪಿಎ ಸರಕಾರವು ಇಡೀ ಭೂಮಿಯನ್ನು ಅಧಿಸೂಚನೆಯ ಮೂಲಕ ವಕ್ಫ್ ಮಂಡಳಿಗೆ ಹಸ್ತಾಂತರಿಸಿತ್ತು ಎಂದು ಹೇಳಿದ್ದರು.
ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಮಂಡಳಿಯ ಹಿರಿಯ ಅಧಿಕಾರಿಯೋರ್ವರು,‘ನಾನು 18 ವರ್ಷಗಳಿಂದಲೂ ದಿಲ್ಲಿ ವಕ್ಫ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಂಡಳಿಯು ಸಂಸತ್ ಸಂಕೀರ್ಣ ಅಥವಾ ಆಸುಪಾಸಿನ ಸಂಕೀರ್ಣಗಳ ಮೇಲೆ ಯಾವುದೇ ಹಕ್ಕು ಮಂಡಿಸಿರಲಿಲ್ಲ. ಸಚಿವರ ಈ ಹೇಳಿಕೆ ನಿಜವಲ್ಲ ’ಎಂದು ತಿಳಿಸಿದರು.