ನ್ಯಾ.ವರ್ಮಾ ನಿವಾಸದಲ್ಲಿ ನಗದು ಪತ್ತೆ ವಿವಾದ ಹಿನ್ನಲೆ: ತಮ್ಮ ಆಸ್ತಿಗಳ ಬಹಿರಂಗಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿರ್ಧಾರ

Photo credit: PTI
ಹೊಸದಿಲ್ಲಿ: ಮಹತ್ವದ ನಿರ್ಧಾರವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಘೋಷಿಸಲು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.
ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರಿಗೆ ಸಲ್ಲಿಸಲಾಗುವ ಘೋಷಣೆಗಳನ್ನು ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಎ.1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಭೆಯ ನಿರ್ಣಯದ ಪ್ರತಿಯನ್ನು ಇನ್ನಷ್ಟೇ ಸಾರ್ವಜನಿಕಗೊಳಿಸಬೇಕಿದೆ.
ಇತ್ತೀಚಿಗೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ಶರ್ಮಾ ಅವರ ನಿವಾಸದಲ್ಲಿ ಭಾರೀ ಮೊತ್ತದ ನಗದು ಪತ್ತೆಯಾದ ಬಳಿಕ ನ್ಯಾಯಾಂಗದ ಋಜುತ್ವದ ಬಗ್ಗೆ ಪ್ರಶ್ನೆಗಳೆದ್ದಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. ನಗದು ಪತ್ತೆ ಪ್ರಕರಣವನ್ನು ಆಂತರಿಕ ನ್ಯಾಯಾಂಗ ಸಮಿತಿಯು ಪರಿಶೀಲಿಸುತ್ತಿದ್ದು, ಈ ನಡುವೆ ನ್ಯಾ.ವರ್ಮಾರನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
1997ರಲ್ಲಿ ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಪೂರ್ಣ ನ್ಯಾಯಾಲಯದ ಸಭೆಯು,ನ್ಯಾಯಾಧೀಶರು ತಮ್ಮ ಅಥವಾ ತಮ್ಮ ಸಂಗಾತಿಯ ಅಥವಾ ತಮ್ಮ ಅವಲಂಬಿತರ ಹೆಸರುಗಳಲ್ಲಿರುವ ಆಸ್ತಿಗಳನ್ನು ಸಿಜೆಐಗೆ ಬಹಿರಂಗಗೊಳಿಸಬೇಕು ಎಂದು ನಿರ್ಣಯವನ್ನು ಅಂಗೀಕರಿಸಿತ್ತು.
2009ರಲ್ಲಿ ಇನ್ನೊಂದು ಪೂರ್ಣ ನ್ಯಾಯಾಲಯವು ನ್ಯಾಯಾಧೀಶರ ಆಸ್ತಿ ವಿವರಗಳನ್ನು ‘ಸ್ವಯಂಪ್ರೇರಿತ’ವಾಗಿ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಘೋಷಿಸುವ ನಿರ್ಣಯವನ್ನು ಕೈಗೊಂಡಿತ್ತು. ಆದರೆ 2018ರಿಂದ ಖಾಸಗಿ ಕಳವಳಗಳನ್ನು ಉಲ್ಲೇಖಿಸಿ ಸಿಜೆಐಗೆ ಸಲ್ಲಿಸಲಾದ ಆಸ್ತಿ ಘೋಷಣೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲಾಗುತ್ತಿಲ್ಲ.
ನ್ಯಾಯಾಧೀಶರ ಖಾಸಗಿ ಆಸ್ತಿಗಳು ಮತ್ತು ಹೊಣೆಗಾರಿಕೆಗಳು ‘ವೈಯಕ್ತಿಕ ಮಾಹಿತಿಯಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ 2019ರ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು.