ವಕ್ಫ್ ಭೂ ಕಬಳಿಕೆ ಆರೋಪಿಸಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್‌ಗೆ 'ಪುಷ್ಪ' ಸಿನಿಮಾ ಸಂಭಾಷಣೆ ಶೈಲಿಯಲ್ಲೇ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ : ವಕ್ಫ್ ಭೂಮಿ ಕಬಳಿಕೆ ಮಾಡಿದ್ದಾರೆ ಎಂಬ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಆರೋಪಕ್ಕೆ ʼಮೇ..ಜುಕೇಂಗೆ ನಹೀʼ ಎಂಬ ಪುಷ್ಪ ಚಿತ್ರದ ಸಂಭಾಷಣೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ದಾಳಿಗಳಿಗೆ ನಾನು ತಲೆ ಬಾಗುವುದಿಲ್ಲ. ವಕ್ಫ್ ಭೂಮಿ ಕಬಳಿಕೆ ಮಾಡಿದ್ದಾರೆಂಬ ಆರೋಪವನ್ನು ಸಾಬೀತು ಪಡಿಸಿ ಎಂದು ಹೇಳಿದರು.
ಬಿಜೆಪಿ ನಾಯಕರು ನನ್ನನ್ನು ಹೆದರಿಸಬೇಕೆಂದು ಬಯಸಿದರೆ, ನಾನು ಎಂದಿಗೂ ತಲೆಬಾಗುವುದಿಲ್ಲ. ನೆನಪಿಡಿ, ನಾನು ಬೆದರಿಕೆಗೆ ಹೆದರುವವನಲ್ಲ. ನನ್ನ ಜೀವನ ಯಾವಾಗಲೂ ತೆರೆದ ಪುಸ್ತಕವಾಗಿದೆ. ನನ್ನ ಜೀವನ ಹೋರಾಟಗಳಿಂದ ಕೂಡಿದೆ. ನಾನು ಯಾವಾಗಲೂ ಸಾರ್ವಜನಿಕ ಜೀವನದಲ್ಲಿ ಅತ್ಯುನ್ನತ ಮೌಲ್ಯಗಳನ್ನು ಎತ್ತಿ ಹಿಡಿದಿದ್ದೇನೆ. ನಿನ್ನೆ ಲೋಕಸಭೆಯಲ್ಲಿ ಅನುರಾಗ್ ಠಾಕೂರ್ ಅವರು ನನ್ನ ಮೇಲೆ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಹೊರಿಸಿದರು. ಸುಮಾರು 60 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಇಂತಹ ಕಳಂಕವನ್ನು ಎಂದೂ ಎದುರಿಸಿಲ್ಲ. ಅವರ ಹೇಳಿಕೆಯಿಂದ ನನ್ನ ರಾಜಕೀಯ ಜೀವನಕ್ಕೆ ಹಾನಿಯಾಗಿದೆ ಎಂದು ಹೇಳಿದರು.
ಅನುರಾಗ್ ಠಾಕೂರ್ ಹೇಳಿಕೆಯಿಂದ ನನ್ನ ರಾಜಕೀಯ ವೃತ್ತಿಜೀವನದ ಮೇಲೆ ಕಳಂಕ ಉಂಟಾಗಿದೆ. ಈ ಬಗ್ಗೆ ಬಿಜೆಪಿ ಕ್ಷಮೆಯಾಚಿಸಬೇಕು. ಮಾಜಿ ಸಚಿವ ಅನುರಾಗ್ ಠಾಕೂರ್ ಈ ಆರೋಪವನ್ನು ಸಾಬೀತುಪಡಿಸದಿದ್ದರೆ ಅವರಿಗೆ ಸಂಸತ್ತಿನಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ. ಅವರು ರಾಜೀನಾಮೆ ನೀಡಬೇಕು. ವಕ್ಫ್ ಭೂಮಿಯನ್ನು ನಾನು ಅಥವಾ ನನ್ನ ಮಕ್ಕಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ. ಈ ವಿಷಯಗಳಿಗೆ ನಾನು ಹೆದರುವುದಿಲ್ಲ. ನಾನು ಕೂಲಿಕಾರ್ಮಿಕನ ಮಗ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿರಿಸಿದ ವಕ್ಫ್ ಆಸ್ತಿಗಳನ್ನು ರಾಜಕೀಯ ಸಾಮ್ರಾಜ್ಯವನ್ನು ನಿರ್ಮಿಸಲು ಬಳಸಿಕೊಳ್ಳುತ್ತಿವೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದರು.