ಸುಳ್ಳು ಪುರಾವೆ ಸೃಷ್ಟಿಸಿದ ಪೊಲೀಸರು: ಕೊಲೆ ಆರೋಪಿ ಸುಪ್ರೀಂಕೋರ್ಟ್ ನಲ್ಲಿ ದೋಷಮುಕ್ತ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಉತ್ತರಾಖಂಡದಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣವೊಂದರ ತನಿಖೆಯನ್ನು ಪೊಲೀಸರು ನಿರ್ಲಕ್ಷ್ಯದಿಂದ ನಡೆಸಿ ಸುಳ್ಳು ಪುರಾವೆಗಳನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯ ಲೋಪದಿಂದಾಗಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಆರೋಪಿಯನ್ನು ಸುಪ್ರೀಂಕೋರ್ಟ್ ದೋಷಮುಕ್ತಗೊಳಿಸಿದೆ.
ಸಾವಿನ ನೆರಳಿನಲ್ಲಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಜೈಲುವಾಸ ಅನುಭವಿಸಿದ ಆರೋಪಿಯನ್ನು ನಿರ್ದೋಷಿ ಎಂದು ಸುಪ್ರೀಂಕೋರ್ಟ್ ಘೋಷಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ನ್ಯಾಯಪೀಠ, ವಿಧಿವಿಜ್ಞಾನ ತಜ್ಞರ ವರದಿ ಸೇರಿದಂತೆ ಎಲ್ಲ ಪುರಾವೆಗಳನ್ನು ಪರಿಶೀಲಿಸಿದ ಬಳಿಕ, ಆರೋಪಿಯ ವಿರುದ್ಧ ಯಾವ ವಿಶ್ವಾಸಾರ್ಹ ಪುರಾವೆಯ ಒಂದು ತುಣುಕು ಕೂಡಾ ಕಾಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಪೊಲೀಸರು ಮತ್ತು ವಿಚಾರಣಾ ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ತನಿಖೆ ಮತ್ತು ಅಭಿಯೋಜನೆ ನಡೆಸಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ಉತ್ತರಾಖಂಡದ ಉಧಾಂಸಿಂಗ್ ನಗರ ಜಿಲ್ಲೆಯಲ್ಲಿ 2016ರ ಜೂನ್ ನಲ್ಲಿ ಈ ಘಟನೆ ನಡೆದಿದ್ದು, ಜಾಗರಣೆ ವೇಳೆ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಮೃತದೇಹ ಪಕ್ಕದ ಹೊಲದಲ್ಲಿ ಪತ್ತೆಯಾಗಿತ್ತು. ಒಂದು ದಿನದ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಎಫ್ಐಆರ್ ದಾಖಲಿಸುವ ವೇಳೆ, ಬಾಲಕಿಯನ್ನು ವ್ಯಕ್ತಿಯ ಜತೆ ನೋಡಿದ್ದಾಗಿ ಹೇಳುವ ಯಾವ ಸಾಕ್ಷಿಯೂ ಪೊಲೀಸರ ಬಳಿ ಇರಲಿಲ್ಲ. ಈತ ಜಾಗರಣ ಕಾರ್ಯಕ್ರಮದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯ ಜವಾಬ್ದಾರಿ ಹೊಂದಿದ್ದ. ಆದರೆ ಪೊಲೀಸರು ಆತನ ವಿರುದ್ಧ ಆರೋಪ ಹೊರಿಸಿದರು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರನ್ನು ಪಾಟೀಸವಾಲಿಗೆ ಗುರಿಪಡಿಸಿಲ್ಲ ಮತ್ತು ಯಾವ ಪೊಲೀಸ್ ಗೆ ಮಾದರಿಗಳನ್ನು ಹಸ್ತಾಂತರಿಸಲಾಗಿದೆ ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ. ಮಾದರಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುರಕ್ಷಿತವಾಗಿ ನೀಡಲಾಗಿದೆ ಎಂದೂ ಹೇಳಿಲ್ಲ. ಆರೋಪಿಯಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದ ಪೊಲೀಸರು ಅದಕ್ಕೇ ಅಂಟಿಕೊಂಡರು ಎಂದು ವಿಶ್ಲೇಷಿಸಿದೆ.
ಪೊಲೀಸರು ನೀಡಿರುವ ಪುರಾವೆ ಸಂಪೂರ್ಣ ನಂಬಲಸಾಧ್ಯ. ಸಂಗ್ರಹಿಸಿದ ಪುರಾವೆಗಳು ಕೂಡಾ ಸುಳ್ಳು. ಅರ್ಜಿದಾರನಿಗೆ ಸಾಕ್ಷಿಗಳನ್ನು ನಾಶಪಡಿಸುವ ಎಲ್ಲ ಅವಕಾಶವೂ ಇತ್ತು. ಘಟನೆ ನಡೆದ ಎರಡು ದಿನಗಳ ಬಳಿಕವೂ ಪೊಲೀಸರು ವಶಪಡಿಸಿಕೊಂಡ ಬಟ್ಟೆಗಳನ್ನು ಇಟ್ಟುಕೊಳ್ಳುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ.