ವಕ್ಫ್ ಮಸೂದೆ ಮೂಲಕ ಬಿಜೆಪಿ ಕೋಮು ಧ್ರುವೀಕರಣವನ್ನು ಉತ್ತೇಜಿಸುತ್ತಿದೆ : ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್
ಹೊಸದಿಲ್ಲಿ : ಭಾರತೀಯ ಜನತಾ ಪಕ್ಷ ಕೋಮು ಧ್ರುವೀಕರಣವನ್ನು ಉತ್ತೇಜಿಸುತ್ತಿದೆ ಮತ್ತು ವಕ್ಫ್ ತಿದ್ದುಪಡಿ ಮಸೂದೆಯು ಅಸಂವಿಧಾನಿಕ ಮತ್ತು ಸುಳ್ಳಿನಿಂದ ಕೂಡಿದೆ. ಸಂಸದೀಯ ಸಮಿತಿಯಲ್ಲಿನ ವಿರೋಧ ಪಕ್ಷದ ಸದಸ್ಯರ ಯಾವುದೇ ಶಿಫಾರಸುಗಳನ್ನು ಮಸೂದೆಯಲ್ಲಿ ಸೇರಿಸಲಾಗಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಡಾ. ಸಯ್ಯದ್ ನಾಸಿರ್ ಹುಸೇನ್ ಆರೋಪಿಸಿದರು.
ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಡಾ. ಸಯ್ಯದ್ ನಾಸಿರ್ ಹುಸೇನ್, ಮಸೂದೆಯು ಸಂಪೂರ್ಣವಾಗಿ ಸುಳ್ಳು ಮತ್ತು ಬಿಜೆಪಿಯ ತಪ್ಪು ಪ್ರಚಾರದಿಂದ ಕೂಡಿದೆ. ನೀವು ಕೋಮು ಧ್ರುವೀಕರಣ ಮಾಡುತ್ತಿದ್ದೀರಿ, ಬಳಿಕ ನಾವು ಕೋಮು ಧ್ರುವೀಕರಣ ಮಾಡುತ್ತೇವೆ ಎಂದು ಆರೋಪಿಸುತ್ತಿದ್ದೀರಿ. ಈ ಮಸೂದೆಯು ಸಂಪೂರ್ಣವಾಗಿ ಸುಳ್ಳನ್ನು ಆಧರಿಸಿದೆ ಮತ್ತು ಕಳೆದ ಆರು ತಿಂಗಳಿನಿಂದ ಈ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿಯ ನಕಲಿ ಕಾರ್ಖಾನೆಯು ತಪ್ಪು ಮಾಹಿತಿ ಹರಡುವಲ್ಲಿ ತೊಡಗಿದೆ ಎಂದು ಡಾ. ಸಯ್ಯದ್ ನಾಸಿರ್ ಹುಸೇನ್ ಆರೋಪಿಸಿದರು.
ವಕ್ಫ್ ಆಸ್ತಿಗಳ ನ್ಯಾಯಸಮ್ಮತತೆಯನ್ನು ಸಮರ್ಥಿಸಿದ ಅವರು, ಆ ಆಸ್ತಿಗಳು ಇಂದಿಗೂ ಅಸ್ತಿತ್ವದಲ್ಲಿವೆ ಮತ್ತು ದೀರ್ಘಕಾಲದಿಂದ ಬಳಕೆಯಲ್ಲಿವೆ. ಅದು ವಕ್ಫ್‌ನಲ್ಲಿದೆ ಎಂಬುದಕ್ಕೆ ಪುರಾವೆಯಾಗಿದೆ. ವಕ್ಫ್, ದೇವಾಲಯ, ಗುರುದ್ವಾರ ಸೇರಿದಂತೆ ಎಲ್ಲದಕ್ಕೂ ಪುರಾವೆಗಳನ್ನು ಹೇಗೆ ಕೇಳುತ್ತೀರಿ? ಬಿಜೆಪಿಯವರು ಗಲಭೆಗಳಿಗೆ ಪ್ರಚೋದನೆ ನೀಡಿ ವೋಟ್ ಬ್ಯಾಂಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಾಸೀರ್ ಹುಸೇನ್ ಇದೇ ವೇಳೆ ಆರೋಪಿಸಿದರು.
ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಬುಧವಾರ ಅಂಗೀಕಾರವಾಗಿದೆ. ಗುರುವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದರು.