ಮೈಕ್ರೋಸಾಫ್ಟ್‌ನ 50ನೇ ವಾರ್ಷಿಕೋತ್ಸವದಲ್ಲಿ ಫೆಲೆಸ್ತೀನ್ ಪರ ಘೋಷಣೆ ಕೂಗಿದ ಭಾರತೀಯ ಅಮೆರಿಕನ್ ವಾನಿಯಾ ಅಗ್ರವಾಲ್ ಯಾರು?

PC : NDTV
ಹೊಸದಿಲ್ಲಿ: ಕಳೆದ ವಾರ ವಾಷಿಂಗ್ಟನ್‌ನ ರೆಡ್ಮಂಡ್‌ನಲ್ಲಿರುವ ಮೈಕ್ರೋಸಾಫ್ಟ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಕಂಪನಿಯ 50ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ಫೆಲೆಸ್ತೀನ್ ಪರ ಬೆಂಬಲಿಗರು ಎರಡು ಸಲ ವ್ಯತ್ಯಯವನ್ನುಂಟು ಮಾಡಿದ್ದರು. ಎರಡೂ ಸಂದರ್ಭಗಳಲ್ಲಿ ಕಾರ್ಯಕ್ರಮಕ್ಕೆ ಅಡ್ಡಿಯನ್ನುಂಟು ಮಾಡಿದ ಕಂಪನಿಯ ಉದ್ಯೋಗಿಗಳು ಮಹಿಳೆಯರಾಗಿದ್ದರು ಮತ್ತು ಇಬ್ಬರೂ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭಟನೆಯ ಕುರಿತು ಕಂಪನಿಯ ಎಲ್ಲರಿಗೂ ಇಮೇಲ್‌ಗಳನ್ನು ರವಾನಿಸಿದ್ದರು.
ಮೊದಲ ಘಟನೆಯಲ್ಲಿ ಮೈಕ್ರೋಸಾಫ್ಟ್‌ನ ಎಐ ಸಿಇಒ ಮುಸ್ತಫಾ ಸುಲೇಮಾನ್ ಭಾಷಣ ಮಾಡುತ್ತಿದ್ದಾಗ ವೇದಿಕೆಯತ್ತ ಹೆಜ್ಜೆ ಹಾಕಿದ ಕಂಪನಿಯ ಕೃತಕ ಬುದ್ಧಿಮತ್ತೆ ವಿಭಾಗದ ಸಾಫ್ಟವೇರ್ ಇಂಜಿನಿಯರ್ ಇಬ್ತಿಹಾಲ್ ಅಬುಸ್ಸಾದ್ ಅವರು ‘ಮುಸ್ತಫಾ,ನಿಮಗೆ ನಾಚಿಕೆಯಾಗಬೇಕು’ ಎಂದು ಕೂಗಿದರು.
ಎರಡನೇ ಘಟನೆಯಲ್ಲಿ ಮೈಕ್ರೋಸಾಫ್ಟ್‌ನ ಪ್ರಸ್ತುತ ಸಿಇಒ ಸತ್ಯ ನಾದೆಲ್ಲ ಹಾಗೂ ಮಾಜಿ ಸಿಇಒಗಳಾದ ಸ್ಟೀವ್ ಬಾಲ್ಮರ್ ಮತ್ತು ಬಿಲ್ ಗೇಟ್ಸ್ ವೇದಿಕೆಯಲ್ಲಿ ಆಸೀನರಾಗಿ ಕಂಪನಿಯ ಕುರಿತು ಮಾತನಾಡುತ್ತಿದ್ದಾಗ ಭಾರತೀಯ-ಅಮೆರಿಕನ್ ವಾನಿಯಾ ಅಗ್ರವಾಲ್ ಎದ್ದುನಿಂತು ಕೂಗಾಡಲು ಆರಂಭಿಸಿದ್ದರು. ‘ನಿಮಗೆಲ್ಲರಿಗೂ ನಾಚಿಕೆಯಾಗಬೇಕು. ನೀವೆಲ್ಲ ಕಪಟಿಗಳು’ ಎಂದು ಕೂಗಿದ ಅಗ್ರವಾಲ್,‘ಗಾಝಾದಲ್ಲಿ ಮೈಕ್ರೋಸಾಫ್ಟ್ ತಂತ್ರಜ್ಞಾನದಿಂದ 50,000 ಫೆಲೆಸ್ತೀನಿಗಳನ್ನು ಕೊಲ್ಲಲಾಗಿದೆ. ನಿಮಗೆಷ್ಟು ಧೈರ್ಯ? ಅವರ ರಕ್ತದಲ್ಲಿ ಸಂಭ್ರಮವನ್ನು ಆಚರಿಸುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಇಸ್ರೇಲ್‌ನೊಂದಿಗೆ ಸಂಬಂಧವನ್ನು ಕಡಿದುಕೊಳ್ಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಭದ್ರತಾ ಸಿಬ್ಬಂದಿಗಳು ಅವರನ್ನು ಹೊರಕ್ಕೆ ಕರೆದೊಯ್ದರು. ಕೆಲವು ಉದ್ಯೋಗಿಗಳು ಅಗ್ರವಾಲ್‌ರನ್ನು ಅಪಹಾಸ್ಯ ಮಾಡಿದ್ದನ್ನೂ ಆನ್‌ಲೈನ್ ವೀಡಿಯೊಗಳು ತೋರಿಸಿವೆ.
ಅಗ್ರವಾಲ್ ‘ನೋ ಅಝ್ಯೂರ್ ಫಾರ್ ಅಪರ್ಥೈಡ್’ ಎಂದೂ ಉಲ್ಲೇಖಿಸಿದ್ದರು. ಇಸ್ರೇಲ್‌ನ ವರ್ಣಭೇದ ನೀತಿ ಮತ್ತು ನರಮೇಧದಲ್ಲಿ ತನ್ನ ನೇರ ಮತ್ತು ಪರೋಕ್ಷ ಶಾಮೀಲಾತಿಯನ್ನು ಮೈಕ್ರೋಸಾಫ್ಟ್ ಅಂತ್ಯಗೊಳಿಸಬೇಕು ಎಂದು ಒತ್ತಾಯಿಸುತ್ತಿರುವ ಕಂಪನಿಯ ಉದ್ಯೋಗಿಗಳ ಈ ಗುಂಪು ಮೈಕ್ರೋಸಾಫ್ಟ್‌ನ ಒಳಗೆ ಮತ್ತು ಹೊರಗೆ ಪ್ರತಿಭಟನೆಗಳನ್ನು ಸಂಘಟಿಸಿತ್ತು ಎನ್ನಲಾಗಿದೆ.
ನಾದೆಲ್ಲರತ್ತ ಕೂಗಿದ್ದ ಅಗ್ರವಾಲ್ ಯಾರು?
ಕಂಪನಿಯ ಕೃತಕ ಬುದ್ಧಿಮತ್ತೆ ವಿಭಾಗದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವಾನಿಯಾ ಅಗ್ರವಾಲ್ ಭಾರತೀಯ-ಅಮೆರಿಕನ್ ಆಗಿರಬಹುದು ಎನ್ನುವುದನ್ನು ಅವರ ಹೆಸರು ಸೂಚಿಸುತ್ತದೆ. ‘ಕಳೆದ ಒಂದೂವರೆ ವರ್ಷಗಳಿಂದಲೂ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ ಬಳಿಕ ಮೈಕ್ರೋಸಾಫ್ಟ್‌ನ್ನು ತೊರೆಯಲು ನಾನು ನಿರ್ಧರಿಸಿದ್ದೇನೆ’ ಎಂದು ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ ಅವರು ಬರೆದಿದ್ದಾರೆ. ‘ಎ.11,ಶುಕ್ರವಾರ ಕಂಪನಿಯಲ್ಲಿ ನನ್ನ ಕೊನೆಯ ದಿನವಾಗಲಿದೆ. ಮೈಕ್ರೋಸಾಫ್ಟ್‌ನ 50ನೇ ವಾರ್ಷಿಕೋತ್ಸವದಲ್ಲಿ ಸತ್ಯ ನಾದೆಲ್ಲ ಭಾಷಣ ಮಾಡುತ್ತಿದ್ದಾಗ ನಾನು ಅವರತ್ತ ಕೂಗಿದ್ದನ್ನು ನೀವು ನೋಡಿರಬಹುದು ’ಎಂದು ಬರೆದಿರುವ ಅಗ್ರವಾಲ್,ತಾನು ಕಂಪನಿಯನ್ನು ತೊರೆಯಲು ನಿರ್ಧರಿಸಿದ್ದು ಏಕೆ ಮತ್ತು ಕಾರ್ಯಕ್ರಮದ ನಡುವೆ ಮಾತನಾಡಿದ್ದು ಏಕೆ ಎನ್ನುವುದನ್ನು ಇಮೇಲ್‌ನಲ್ಲಿ ವಿವರಿಸಿದ್ದಾರೆ. ಗಾಝಾದಲ್ಲಿಯ ನರಮೇಧದಲ್ಲಿ ಮೈಕ್ರೋಸಾಫ್ಟ್ ಭಾಗಿಯಾಗಿದೆ ಎಂಬ ತನ್ನ ಆರೋಪವನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ.