ಮಣಿಪುರ | ವಕ್ಫ್ ಮಸೂದೆ ಕುರಿತು ಪೋಸ್ಟ್ ಮಾಡಿದ್ದ ಬಿಜೆಪಿ ನಾಯಕನ ನಿವಾಸಕ್ಕೆ ಬೆಂಕಿ; ತೌಬಲ್‌ನಲ್ಲಿ ನಿಷೇಧಾಜ್ಞೆ ಜಾರಿ

Photo credit: indiatoday.in
ಇಂಫಾಲ: ಸಂಸತ್ತಿನಲ್ಲಿ ವಕ್ಫ್ ಮಸೂದೆ ಅಂಗೀಕಾರಗೊಂಡಿದ್ದನ್ನು ಸ್ವಾಗತಿಸಿ, ಬಿಜೆಪಿ ನಾಯಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ ಅನ್ನು ಖಂಡಿಸಿ, ರವಿವಾರ ರಾತ್ರಿ ಗುಂಪೊಂದು ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಇದರ ಬೆನ್ನಿಗೇ, ತೌಬಕ್ ಜಿಲ್ಲಾಧಿಕಾರಿ ಲಿಲಾಂಗ್ ವಿಧಾನಸಭಾ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ವಕ್ಫ್ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದನ್ನು ಸ್ವಾಗತಿಸಿ ಬಿಜೆಪಿಯ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಮುಹಮ್ಮದ್ ಅಸ್ಕರ್ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ಕುಪಿತಗೊಂಡ ಸುಮಾರು 7,000 ಮಂದಿಯಿದ್ದ ಸಶಸ್ತ್ರ ಗುಂಪೊಂದು, ಲಿಲಾಂಗ್ ಸಂಬ್ರುಖಾಂಗ್ ಮಾಮೇಯಿಯಲ್ಲಿರುವ ಅವರ ನಿವಾಸಕ್ಕೆ ನುಗ್ಗಿ, ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಲಿಲಾಂಗ್ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು, ಲಿಲಾಂಗ್ ವಿಧಾನಸಭಾ ಕ್ಷೇತ್ರದಲ್ಲಿನ ಶಾಂತಿ ಹಾಗೂ ಸಾರ್ವಜನಿಕ ಸಾಮರಸ್ಯಕ್ಕೆ ಧಕ್ಕೆಯಾಗುವ ಅಪಾಯದ ಸಾಧ್ಯತೆ ಇದೆ. ಹೀಗಾಗಿ, ಲಿಲಾಂಗ್ ವಿಧಾನಸಭಾ ಕ್ಷೇತ್ರದ ಸಂಪೂರ್ಣ ವ್ಯಾಪ್ತಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಕೋರಲಾಗಿದೆ. ತೌಬಾಲ್ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸಿರುವ ವರದಿಯನ್ನು ನಾನು ಪರಿಶೀಲಿಸಿದ್ದು, ಗಂಭೀರ ಸ್ವರೂಪದ ಶಾಂತಿ ಭಂಗ, ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಹಾಗೂ ಮನುಷ್ಯರ ಜೀವ ಆಸ್ತಿಪಾಸ್ತಿಗಳಿಗೆ ಆಗಬಹುದಾದ ಸಂಭವನೀಯ ಅಪಾಯವನ್ನು ತಪ್ಪಿಸಲು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲು ಸಾಕಷ್ಟು ಆಧಾರಗಳಿವೆ" ಎಂದು ತೌಬಾಲ್ ಜಿಲ್ಲಾಧಿಕಾರಿ ತಮ್ಮ ನಿಷೇಧಾಜ್ಞೆ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
"ವಕ್ಫ್ ತಿದ್ದುಪಡಿ ಮಸೂದೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಮಸೂದೆಯನ್ನು ಸ್ವಾಗತಿಸಿ. ನಾವು ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುತ್ತೇವೆ" ಎಂದು ಮುಹಮ್ಮದ್ ಅಸ್ಕರ್ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬೆನ್ನಿಗೇ ಈ ಘಟನೆ ಜರುಗಿದೆ.