ವಕ್ಫ್ ಮಸೂದೆ ಚರ್ಚೆಗೆ ಗೈರುಹಾಜರಾದ ಪ್ರಿಯಾಂಕಾ ಗಾಂಧಿ: ಎಲ್ಲಿದ್ದರು ವಯನಾಡ್ ಸಂಸದೆ?

ಪ್ರಿಯಾಂಕಾ ಗಾಂಧಿ (PTI)
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತಾದ ಲೋಕಸಭೆಯ ಚರ್ಚೆಗೆ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಗೈರುಹಾಜರಾಗಿದ್ದು, ಇದು ವಕ್ಫ್ ಮಸೂದೆ ಕುರಿತಾಗಿನ ಅವರ ನಿಲುವು ಮತ್ತು ಪಕ್ಷದ ಶಿಸ್ತಿನ ಬಗ್ಗೆ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.
ಮಸೂದೆ ಪ್ರಮುಖ ಶಾಸಕಾಂಗ ವಿಷಯವಾಗಿದ್ದರೂ, ಅವರು ಅಧಿವೇಶನಕ್ಕೆ ಹಾಜರಾಗಲಿಲ್ಲ. ಬದಲಾಗಿ, ನಿಕಟ ಸಂಬಂಧಿಯೊಬ್ಬರ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಿಯಾಂಕಾ ವಿದೇಶದಲ್ಲಿದ್ದಾರೆ ಎಂದು ವರದಿಯಾಗಿದೆ.
ಗಾಂಧಿಯವರು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಅನುಮೋದನೆ ಪಡೆದಿದ್ದರು ಎಂದು ವರದಿಯಾಗಿದೆ, ಸ್ಪೀಕರ್‌ಗೆ ಔಪಚಾರಿಕವಾಗಿ ಲಿಖಿತವಾಗಿ ಮಾಹಿತಿ ನೀಡಿರುವ ಅವರು, ಈ ವಿಷಯವನ್ನು ಕಾಂಗ್ರೆಸ್ ಸಂಸದೀಯ ಪಕ್ಷಕ್ಕೆ ತಿಳಿಸಿದ್ದಾರೆ.
ಮಸೂದೆಯನ್ನು ವಿರೋಧಿಸಲು ತನ್ನ ಎಲ್ಲಾ ಲೋಕಸಭಾ ಸಂಸದರು ಸತತ ಮೂರು ದಿನಗಳ ಕಾಲ ಹಾಜರಿರಬೇಕು ಎಂದು ಕಾಂಗ್ರೆಸ್ ವಿಪ್ ಹೊರಡಿಸಿತ್ತು. ಆದಾಗ್ಯೂ, ಪ್ರಿಯಾಂಕಾ ಗೈರುಹಾಜರಿಯು ಪಕ್ಷದ ನಿರ್ದೇಶನಗಳನ್ನು ಪಾಲಿಸುವ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಅದಾಗ್ಯೂ, ಕಾಂಗ್ರೆಸ್ ಸಂಸದೀಯ ಸಮಿತಿಯು ಅವರ ಗೈರುಹಾಜರಿಯು ಪಕ್ಷದ ವಿಪ್ ಅನ್ನು ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಲೋಕಸಭೆಯ ಚರ್ಚೆಯ ಆರಂಭದಲ್ಲಿ ರಾಹುಲ್ ಗಾಂಧಿ ಅವರೂ ಗೈರುಹಾಜರಾಗಿದ್ದರೂ, ನಂತರ ತಡವಾಗಿ ಬಂದ ಅವರು ಲೋಕಸಭೆ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಎಂಬ ವಿಮರ್ಶೆಯೂ ಎದುರಾಗಿದೆ. ಆದರೆ, ಅವರು ಮಸೂದೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅನುಪಸ್ಥಿತಿಯು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಕಾರಣವಾಯಿತು. ಸಂಸತ್ತಿನ ಹೊರಗೆ ಮಸೂದೆಗೆ ಪಕ್ಷ ತೀವ್ರ ವಿರೋಧ ಮಾಡುತ್ತಿರುವ ಹೊರತಾಗಿಯೂ ಅವರು ದೂರ ಉಳಿದಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವು ವಿಮರ್ಶಕರು ಕಾಂಗ್ರೆಸ್ ಮುಖ್ಯವಾದ ನಿರ್ಣಾಯಕ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.