ಮುಂಬೈನ ದಾದರ್ ನಲ್ಲಿರುವ ಕುನಾಲ್ ಕಾಮ್ರಾ ನಿವಾಸಕ್ಕೆ ಪೊಲೀಸರ ಭೇಟಿ: ಸಮಯದ ವ್ಯರ್ಥ ಎಂದು ಗೇಲಿ ಮಾಡಿದ ಸ್ಟ್ಯಾಂಡಪ್ ಕಾಮೆಡಿಯನ್

PC | x.com/kunalkamra88
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ವಿಡಂಬಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಪೊಲೀಸರನ್ನು ಗೇಲಿ ಮಾಡಿರುವ ಸ್ಟ್ಯಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾ, “ಇದು ಸಮಯ ಹಾಗೂ ಸಾರ್ವಜನಿಕ ಸಂಪನ್ಮೂಲದ ವ್ಯರ್ಥ” ಎಂದು ಟೀಕಿಸಿದ್ದಾರೆ.
ಶಿವಸೇನೆ (ಶಿಂದೆ ಬಣ) ಶಾಸಕ ಮುರ್ಜಿ ಪಟೇಲ್ ಸಲ್ಲಿಸಿದ್ದ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಖಾರ್ ಠಾಣೆ ಪೊಲೀಸರು, ಕುನಾಲ್ ಕಾಮ್ರಾಗೆ ಹಲವು ಬಾರಿ ನೋಟಿಸ್ ಕಳಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳೆದುರು ಅವರು ಹಾಜರಾಗಿರಲಿಲ್ಲ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕುನಾಲ್ ಕಾಮ್ರಾ, “ನಾನು ಕಳೆದ ಹತ್ತು ವರ್ಷಗಳಿಂದ ವಾಸವನ್ನೇ ಮಾಡದ ನಿವಾಸದ ವಿಳಾಸಕ್ಕೆ ತೆರಳುವುದು ಸಮಯ ಹಾಗೂ ಸಾರ್ವಜನಿಕ ಸಂಪನ್ಮೂಲದ ವ್ಯರ್ಥವಾಗಿದೆ” ಎಂದು ಲೇವಡಿ ಮಾಡಿದ್ದಾರೆ.
ಕುನಾಲ್ ಕಾಮ್ರಾಗೆ ಹಲವು ಬಾರಿ ನೋಟಿಸ್ ಜಾರಿಗೊಳಿಸಿದ ನಂತರ, ತಮಿಳುನಾಡಿನಲ್ಲಿ ವಾಸಿಸುತ್ತಿರುವ ಅವರೇನಾದರೂ ತಮ್ಮ ನಿವಾಸಕ್ಕೆ ಮರಳಿದ್ದಾರೆಯೆ ಎಂದು ಪರಿಶೀಲಿಸಲು ಪೊಲೀಸರು ಅವರ ನಿವಾಸಕ್ಕೆ ತೆರಳಿದ್ದರು. ಆದರೆ, ಅವರ ದಾದ್ರಾ ನಿವಾಸದಲ್ಲಿ ಯಾರೂ ಇಲ್ಲದೆ ಇರುವುದನ್ನು ಕಂಡ ನಂತರ, ಪೊಲೀಸರ ತಂಡವು ಅಲ್ಲಿಂದ ನಿರ್ಗಮಿಸಿತು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಕುನಾಲ್ ಕಾಮ್ರಾ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಒಂದು ದೂರನ್ನು ಜಲಗಾಂವ್ ನಗರದ ಮೇಯರ್ ದಾಖಲಿಸಿದ್ದರೆ, ಇನ್ನೆರಡು ದೂರುಗಳನ್ನು ನಾಶಿಕ್ ನ ಹೋಟೆಲ್ ಉದ್ಯಮಿ ಮತ್ತು ವ್ಯಾಪಾರಿಯೊಬ್ಬರು ದಾಖಲಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಜನಪ್ರಿಯ ಹಿಂದಿ ಗೀತೆಯೊಂದನ್ನು ಅಣಕಿಸಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ವಿರುದ್ಧ ವಿಶ್ವಾಸ ದ್ರೋಹಿ ಎಂದು ತೀಕ್ಷ್ಣ ದಾಳಿ ನಡೆಸುವ ಮೂಲಕ, ಕುನಾಲ್ ಕಾಮ್ರಾ ವಿವಾದವನ್ನು ಸೃಷ್ಟಿಸಿದ್ದರು. ಆ ಗೀತೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ರಾಜ್ಯ ಸರಕಾರ ಪತನದ ನೇತೃತ್ವ ವಹಿಸುವ ಮೂಲಕ, 2022ರಲ್ಲಿ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಕಾರಣರಾಗಿದ್ದ ಏಕನಾಥ್ ಶಿಂದೆಯನ್ನು ಅವರು ವ್ಯಂಗ್ಯವಾಡಿದ್ದರು.
ಫೆಬ್ರವರಿಯಲ್ಲಿ ಚಿತ್ರೀಕರಣಗೊಂಡಿದ್ದ ‘ನಯಾ ಭಾರತ್’ ಎಂಬ ಹೆಸರಿನ ಕಾರ್ಯಕ್ರಮವನ್ನು ಮಾರ್ಚ್ 23ರಂದು ಕುನಾಲ್ ಕಾಮ್ರಾ ತಮ್ಮ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೊ ವಿರುದ್ಧ ಶಿವಸೇನೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಕುನಾಲ್ ಕಾಮ್ರಾರ ಹೇಳಿಕೆಯನ್ನು ಖಂಡಿಸಿದ್ದ ಶಿವಸೇನೆ ನಾಯಕರು, ಬೇಷರತ್ ಕ್ಷಮೆ ಕೋರುವಂತೆ ಅವರನ್ನು ಆಗ್ರಹಿಸಿದ್ದರು.
ಈ ನಡುವೆ, ಕುನಾಲ್ ಕಾಮ್ರಾ ವಿರುದ್ಧ ದಾಖಲಾಗಿರುವ ಹಲವು ಎಫ್ಐರ್ ಗಳಿಗೆ ಶುಕ್ರವಾರ ಮದ್ರಾಸ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಎಪ್ರಿಲ್ 7ರವರೆಗೆ ಚಾಲ್ತಿಯಲ್ಲಿರುವ ನಿರೀಕ್ಷಣಾ ಜಾಮೀನಿಗೆ ಶರತ್ತುಗಳನ್ನು ವಿಧಿಸಿದ ನ್ಯಾ. ಸುಂದರ್ ಮೋಹನ್, ಕುನಾಲ್ ಕಾಮ್ರಾರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದ್ದಾರೆ.
ನನ್ನ ವಿಡಂಬನಾತ್ಮಕ ಹೇಳಿಕೆಗೆ ಅಸಂಖ್ಯಾತ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಕುನಾಲ್ ಕಾಮ್ರಾ, ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.