ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಹೊಸದಿಲ್ಲಿ: ಮುಸ್ಲಿಂ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಹಾಗೂ ವಿರೋಧ ಪಕ್ಷಗಳಿಂದಲೂ ವಿರೋಧಕ್ಕೆ ಒಳಗಾಗಿರುವ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಬುಧವಾರ ತಡರಾತ್ರಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿತು.
ಮಧ್ಯರಾತ್ರಿಯವರೆಗೂ ನಡೆದ ಸುದೀರ್ಘ ಚರ್ಚೆಯ ಬಳಿಕ ಸ್ಪೀಕರ್ ಓಂ ಬಿರ್ಲಾ ಅವರು ಮಸೂದೆಯನ್ನು ಮತಕ್ಕೆ ಹಾಕಿದರು. ಸದನದಲ್ಲಿ ಮಸೂದೆಯ ಪರವಾಗಿ 288 ಮಂದಿ ಮತ ಚಲಾಯಿಸಿದರು. ಮಸೂದೆಯ ವಿರುದ್ಧವಾಗಿ 232 ಮತಗಳು ಬಿದ್ದವು.
ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರಶ್ನೋತ್ತರ ಕಲಾಪ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.
ಮುಸ್ಲಿಂ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಕಾರ್ಯಕಲಾಪಗಳ ಸಲಹಾ ಸಮಿತಿ ಎಂಟು ಗಂಟೆಗಳ ಕಾಲಾವಕಾಶವನ್ನು ನಿಗದಿಗೊಳಿಸಿತ್ತು. ಮಸೂದೆಗೆ ವಿಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಿಜೆಪಿ ಸೇರಿದಂತೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಎಲ್ಲಾ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದರೆ, ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ಸದಸ್ಯರು ಮಸೂದೆ ವಿರೋಧಿಸಿ ಮತ ಚಲಾಯಿಸಿದರು.
ಲೋಕಸಭೆಯಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಗೆ ಕಳುಹಿಸಲಾಗುವುದು.