ಆರ್‌ಬಿಐ ನೂತನ ಉಪಗವರ್ನರ್ ಆಗಿ ಪೂನಂ ಗುಪ್ತಾ ನೇಮಕ
Update: 2025-04-02 22:21 IST

ಪೂನಂ ಗುಪ್ತಾ | PC : NDTV
ಹೊಸದಿಲ್ಲಿ,ಎ.2: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನ ನೂತನ ಉಪ ಗವರ್ನರ್ ಆಗಿ ಪೂನಂ ಗುಪ್ತಾ ಅವರ ನೇಮಕಕ್ಕೆ ಕೇಂದ್ರ ಸರಕಾರವು ಬುಧವಾರ ಅನುಮೋದನೆ ನೀಡಿದೆ. ಪ್ರಸಕ್ತ ಪೂನಂ ಅವರು ಅನ್ವಯಿಕ ಆರ್ಥಿಕ ಸಂಶೋಧನಾ ರಾಷ್ಟ್ರೀಯ ಮಂಡಳಿಯ ಮಹಾನಿರ್ದೇಶಕಿಯಾಗಿದ್ದಾರೆ. ಈ ವರ್ಷದ ಜನವರಿಯಲ್ಲಿ ಎಂ.ಡಿ. ಪಾತ್ರಾ ಅವರ ನಿರ್ಗಮನದ ಬಳಿಕ ತೆರವಾದ ಆರ್‌ಬಿಐ ಉಪಗವರ್ನರ್ ಸ್ಥಾನಕ್ಕೆ ಪೂನಂ ನೇಮಕಗೊಂಡಿದ್ದಾರೆ. ಅವರ ಅಧಿಕಾರಾವಧಿ ಮೂರು ವರ್ಷಗಳಾಗಿರುವುದು.
ಪೂನಂ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಸದಸ್ಯೆಯೂ ಆಗಿದ್ದಾರೆ ಹಾಗೂ 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸಂಚಾಲಕಿಯಾಗಿದ್ದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಜಂಎಫ್)ಹಾಗೂ ವಿಶ್ವಬ್ಯಾಂಕ್‌ನಲ್ಲಿ ಸುಮಾರು ಎರಡು ದಶಕಗಳ ಕಾಲ ಹಿರಿಯ ಹುದ್ದೆಗಳನ್ನು ನಿರ್ವಹಿಸಿದ್ದರು.
ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್,ಅಮೆರಿಕದ ಮೇರಿಲ್ಯಾಂಡ್ ವಿವಿಯಲ್ಲಿ ಅವರು ಅಧ್ಯಯನ ನಡೆಸಿದ್ದರು.