ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಅರಣ್ಯ ನೆಲಸಮದ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ

PC : telanganatoday.com
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಅರಣ್ಯ ಭೂಮಿಯ ನೆಲಸಮ ಹಾಗೂ 400 ಎಕರೆ ಅರಣ್ಯ ಭೂಮಿಯ ಹರಾಜು ಕ್ರಮವನ್ನು ವಿರೋಧಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯನ್ನು ಸೆರೆ ಹಿಡಿಯುತ್ತಿದ್ದ ಓರ್ವ ಪತ್ರಕರ್ತನನ್ನು ತೆಲಂಗಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ವಶಕ್ಕೆ ಪಡೆದಿರುವ ಪತ್ರಕರ್ತನನ್ನು ಸುಮಿತ್ ಎಂದು ಗುರುತಿಸಲಾಗಿದೆ.
ವಿಶ್ವವಿದ್ಯಾಲಯದ ಅವರಣದಲ್ಲಿ ಮರ ಕಡಿಯುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ವೀಡಿಯೊ ಚಿತ್ರೀಕರಿಸುತ್ತಿದ್ದ ಪತ್ರಕರ್ತನನ್ನು ಕೂಡ ಪೊಲೀಸರು ಬಂಧಿಸಿದಿದ್ದಾರೆ.
ಈ ಕುರಿತ ದೃಶ್ಯವನ್ನು ಪತ್ರಕರ್ತ ಸುಮಿತ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.
ತೆಲಂಗಾಣ ಪೊಲೀಸರ ಈ ಕ್ರಮವನ್ನು ಖಂಡಿಸಿರುವ ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ಸರಕಾರ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೆ.ಟಿ.ರಾಮರಾವ್, "ತೆಲಂಗಾಣದಲ್ಲಿನ ದಮನಕಾರಿ ಪೊಲೀಸ್ ಧೋರಣೆಯು ಅಪಾಯಕಾರಿಯಾಗಿದೆ. ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದ್ದು, ಭಿನ್ನಮತದ ಧ್ವನಿಗಳನ್ನು ಬಂಧಿಸಲಾಗಿದೆ. ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಈ ಕ್ರೂರ ದಮನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯನ್ನೂ ತರಾಟೆಗೆ ತೆಗೆದುಕೊಂಡಿರುವ ಅವರು, "ರಾಹುಲ್ ಗಾಂಧಿ ಇಡೀ ದೇಶಕ್ಕೆ ವಾಕ್ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಕುರಿತು ಬೋಧಿಸುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.