ಕಥುವಾದಲ್ಲಿ ಮತ್ತೆ ಎನ್‌ಕೌಂಟರ್; ಬಲೆಗೆ ಬಿದ್ದ ಮೂವರು ಉಗ್ರರು

Update: 2025-04-01 07:30 IST
ಕಥುವಾದಲ್ಲಿ ಮತ್ತೆ ಎನ್‌ಕೌಂಟರ್; ಬಲೆಗೆ ಬಿದ್ದ ಮೂವರು ಉಗ್ರರು

ಸಾಂದರ್ಭಿಕ ಚಿತ್ರ PC: x.com/ndtvfeed

  • whatsapp icon

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೋಮವಾರ ಉಗ್ರರ ಮತ್ತು ಭದ್ರತಾ ಪಡೆಯ ನಡುವೆ ಎನ್‌ಕೌಂಟರ್ ಆರಂಭವಾಗಿದೆ. ಪೊಲೀಸ್ ತಂಡದತ್ತ ಉಗ್ರರು ಗುಂಡು ಹಾರಿಸಿದ ಬೆನ್ನಲ್ಲೇ ಈ ಚಕಮಕಿ ಆರಂಭವಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ರಾಮಕೋಟೆ ಪ್ರದೇಶದ ಪಂಜ್‌ತೀರ್ಥಿಯಲ್ಲಿ ನಡೆದಿರುವ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾತ್ರಿ ವಿಧಿಸಿರುವ ಪಹರೆಯಲ್ಲಿ ಮೂವರು ಉಗ್ರಗಾಮಿಗಳು ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದ್ದು, ಇವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಪ್ಪತ್ತು ಗಂಟೆಗಳ ಸುಧೀರ್ಘ ಕಾರ್ಯಾಚರಣೆಯಲ್ಲಿ ಇಬ್ಬರು ಜೈಶ್-ಇ-ಮೊಹ್ಮದ್ ಸಂಘಟನೆ ಉಗ್ರರು ಹತರಾದ ಎರಡು ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಗುರುವಾರ ರಾತ್ರಿ ನಡೆದ ಈ ಘೋರ ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸರು ಕೂಡಾ ಜೀವ ಕಳೆದುಕೊಂಡಿದ್ದರು. ಕಾಡಿನಲ್ಲಿ ಅಡಗಿಕೊಂಡಿದ್ದ ಪಾಕಿಸ್ತಾನಿ ಉಗ್ರರ ಜತೆ ಈ ಚಕಮಕಿ ನಡೆದಿತ್ತು.

ಉಗ್ರಗಾಮಿಗಳು ಎನ್ನಲಾದ ಮೂವರು ತಪ್ಪಿಸಿಕೊಂಡಿದ್ದಾರೆ ಹಾಗೂ ಅವರ ಸಂಶಯಾಸ್ಪದ ಚಲನ ವಲನ ಕಂಡುಬರುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವೈಮಾನಿಕ ಕಣ್ಗಾವಲು ಮತ್ತು ಶ್ವಾನಪಡೆಯ ಸಹಾಯದಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಏತನ್ಮಧ್ಯೆ ಹೇಳಿಕೆ ನೀಡಿರುವ ಜಮ್ಮು ಮತ್ತು ಕಾಶ್ಮೀರ ಡಿಐಜಿ ಶಿವಕುಮಾರ್ ಶರ್ಮಾ, ಕಟ್ಟಕಡೆಯ ಉಗ್ರಗಾಮಿ ಹತನಾಗುವವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಯಾವುದೇ ಅನುಮಾನಾಸ್ಪದ ಚಲನ ವಲನಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಗಡಿಭಾಗದ ನಿವಾಸಿಗಳಲ್ಲಿ ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News