‘ಎಂಪುರಾನ್’ ಹಿಂದೂ ವಿರೋಧಿ, ಬಿಜೆಪಿ ವಿರೋಧಿ ನಿರೂಪಣೆಯನ್ನು ಹರಡುತ್ತಿದೆ: ಆರೆಸ್ಸೆಸ್ ನಿಯತಕಾಲಿಕ ಆರ್ಗನೈಸರ್

ಎಂಪುರಾನ್| PC : X
ಹೊಸದಿಲ್ಲಿ: ಮೋಹನ್ ಲಾಲ್ ನಾಯಕತ್ವದ ‘ಎಂಪುರಾನ್’ ಕೇವಲ ಚಿತ್ರ ಮಾತ್ರವಲ್ಲ; ಬದಲಿಗೆ, ಈಗಾಗಲೇ ಮುರಿದು ಬಿದ್ದಿರುವ ಭಾರತವನ್ನು ಮತ್ತಷ್ಟು ವಿಭಜಿಸುವಂಥ ಬೆದರಿಕೆ ಒಡ್ಡುವ ಹಿಂದೂ ವಿರೋಧಿ ಹಾಗೂ ಬಿಜೆಪಿ ವಿರೋಧಿ ನಿರೂಪಣೆಯನ್ನು ಹರಡುವ ಮಾಧ್ಯಮವಾಗಿದೆ ಎಂದು ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ‘ಆರ್ಗನೈಸರ್’ ನಿಯತಕಾಲಿಕವು ಆರೋಪಿಸಿದೆ.
ಚಿತ್ರವು ಗುಜರಾತ್ ನಲ್ಲಿ ನಡೆದ ಗೋಧ್ರೋತ್ತರ ಗಲಭೆಯ ಸೂಕ್ಷ್ಮ ವಿಷಯವನ್ನು ಸ್ಪಷ್ಟ ಮತ್ತು ಅಪಾಯಕಾರಿ ಪಕ್ಷಪಾತದೊಂದಿಗೆ ನಿರೂಪಿಸಿದೆ ಎಂದೂ ಅದು ಆರೋಪಿಸಿದೆ.
ಮಾರ್ಚ್ 28ರಂದು ‘ಆರ್ಗನೈಸರ್’ ವಾರಪತ್ರಿಕೆಯ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ, “ಚಿತ್ರವು ಐತಿಹಾಸಿಕ ಸತ್ಯ ಘಟನೆಗಳ ಕಡೆ ಗಮನ ಹರಿಸುವ ಬದಲು, ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಬೆದರಿಕೆ ಒಡ್ಡುವ ವಿಭಜನಕಾರಿ, ಹಿಂದೂ ವಿರೋಧಿ ನಿರೂಪಣೆಗೆ ಕುಮ್ಮಕ್ಕು ನೀಡಲು 2002ರ ಗೋಧ್ರೋತ್ತರ ಗಲಭೆಗಳನ್ನು ಹಿನ್ನೆಲೆಯಾಗಿ ಬಳಸಿಕೊಂಡಿದೆ” ಎಂದು ಆರೋಪಿಸಲಾಗಿದೆ.
ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾತ್ರ ‘ಆರ್ಗನೈಸರ್’ ನಿಯತಕಾಲಿಕ ನನ್ನ ಮುಖವಾಣಿಯಲ್ಲ ಎಂದು ಹಲವು ಬಾರಿ ಸ್ಪಷ್ಟನೆ ನೀಡಿದೆ.
2019ರ ಯಶಸ್ವಿ ‘ಲೂಸಿಫರ್’ ಚಿತ್ರದ ಎರಡನೆಯ ಭಾಗವಾದ ‘ಎಲ್2-ಎಂಪುರಾನ್’ ಇದೇ ಮಾರ್ಚ್ 27ರಂದು ಬಿಡುಗಡೆಯಾಗಿತ್ತು. ಬಲಪಂಥೀಯ ರಾಜಕಾರಣದ ಬಗೆಗಿನ ಟೀಕೆ ಹಾಗೂ ಗುಜರಾತ್ ಗಲಭೆಯನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಈ ಚಿತ್ರವು ಬಿಸಿಬಿಸಿ ಚರ್ಚೆಯ ವಿಷಯವಾಗಿ ಬದಲಾಗಿದೆ.
ಆದರೆ, ಚಿತ್ರದ ಕುರಿತ ವಿವಾದವನ್ನು ಅಲ್ಲಗಳೆದಿರುವ ಚಿತ್ರಕತೆಗಾರ ಮುರಳಿ ಗೋಪಿ, ಎಲ್ಲರಿಗೂ ತಮ್ಮದೇ ಆದ ರೀತಿಯಲ್ಲಿ ಚಿತ್ರವೊಂದನ್ನು ವ್ಯಾಖ್ಯಾನಿಸುವ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.
PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮುರಳಿ ಗೋಪಿ, “ನಾನು ವಿವಾದದ ಬಗ್ಗೆ ಸಂಪೂರ್ಣವಾಗಿ ಮೌನ ತಾಳುತ್ತೇನೆ. ಅವರು ಅದರ ವಿರುದ್ಧ ಹೋರಾಡಲಿ. ಎಲ್ಲರಿಗೂ ತಮ್ಮದೇ ಆದ ರೀತಿಯಲ್ಲಿ ಚಿತ್ರವೊಂದನ್ನು ವ್ಯಾಖ್ಯಾನಿಸುವ ಸ್ವಾತಂತ್ರ್ಯವಿದೆ’ ಎಂದು ಹೇಳಿದ್ದಾರೆ.