ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿಯದ ಬಿಜೆಪಿಯ 'ಜಾತ್ಯತೀತ' ಮಿತ್ರಪಕ್ಷಗಳು

ಹೊಸದಿಲ್ಲಿ: ಬಿಜೆಪಿ ವಿಶ್ವಾಸದ್ರೋಹ ಎಸಗಿದೆ, ಬಿಜೆಪಿಗೆ ನೀವು ಸಂಪೂರ್ಣ ಶರಣಾಗಿದ್ದೀರಿ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಲೆಕ್ಕಿಸದೇ ಬಿಜೆಪಿಯ 'ಜಾತ್ಯತೀತ' ಮಿತ್ರಪಕ್ಷಗಳು ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವ ಮೂಲಕ ಲೋಕಸಭೆಯಲ್ಲಿ ಬಹುಮತದಿಂದ ಮಸೂದೆ ಅಂಗೀಕಾರವಾಗುವುದನ್ನು ಖಾತರಿಪಡಿಸಿವೆ.
ಪ್ರಾದೇಶಿಕ ಎದುರಾಳಿ ಪಕ್ಷಗಳ 'ಜಾತ್ಯತೀತ' ಎಂಬ ಹಣೆಪಟ್ಟಿಗೆ ಅಗ್ನಿಪರೀಕ್ಷೆ ಎನಿಸಿದ ಈ ಪ್ರಕರಣದಲ್ಲಿ, ತೆಲುಗುದೇಶಂ ಪಕ್ಷ, ಜೆಡಿಯು ಹಾಗೂ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಗಳು ಸರ್ಕಾರದ ಮಸೂದೆ ಪರವಾಗಿ ಮತ ಚಲಾಯಿಸಿದವು.
ಎನ್ ಡಿಎ ಅಧಿಕಾರಾವಧಿಯ ಪೂರ್ವದಲ್ಲಿ ಮುಸ್ಲಿಮರು ಕೂಡಾ ನಿಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಅವರ ಆಕಾಂಕ್ಷೆಗಳನ್ನು ಈಡೇರಿಸಲು ಏನನ್ನೂ ನೀಡಿಲ್ಲ ಎನ್ನುವ ವಾಸ್ತವವನ್ನು ಆ ಪಕ್ಷಗಳಿಗೆ ಮನವರಿಕೆ ಮಾಡುವ ಪ್ರಯತ್ನವನ್ನೂ ವಿರೋಧ ಪಕ್ಷಗಳು ಮಾಡಿದ್ದವು.
ಆ ಪಕ್ಷಗಳ ಮುಖಂಡರು ಮಾತನಾಡುವ ವೇಳೆ, ಜಂಟಿ ಸಂಸದೀಯ ಸಮಿತಿಯಲ್ಲಿ ಮುಸ್ಲಿಂ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ಸಾಕಷ್ಟು ಶ್ರಮ ವಹಿಸಿದ್ದೇವೆ ಎಂದು ಸಮರ್ಥಿಸಿಕೊಂಡರು. ವೈಎಸ್ಆರ್‌ಸಿಪಿ ಪ್ರತಿನಿಧಿಗಳು 38 ಜೆಪಿಸಿ ಸಭೆಗಳ ಪೈಕಿ ಕೇವಲ 18ರಲ್ಲಿ ಭಾಗವಹಿಸಿದ್ದಾರೆ ಎಂದು ಟಿಡಿಪಿಯ ಕೃಷ್ಣಪ್ರಸಾದ್ ತೆನ್ನೇಟಿ ಹೇಳಿದರು. ಜತೆಗೆ ರಾಜ್ಯದಲ್ಲಿ ಉರ್ದು ಭಾಷೆಯನ್ನು ಎರಡನೇ ಭಾಷೆಯಾಗಿ ಮಾನ್ಯತೆ ನೀಡಿದ ಮತ್ತು ಹಜ್ ಹೌಸ್ ನಿರ್ಮಾಣ ಸೇರಿದಂತೆ ಚಂದ್ರಬಾಬು ನಾಯ್ಡು ಅವರು ಕೈಗೊಂಡ ಮುಸ್ಲಿಂ ಪರ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು.
ಜೆಡಿಯು ಸದಸ್ಯ ಹಾಗೂ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಲಾಲನ್, ಪ್ರಧಾನಿ ಮೋದಿಯವರು ಮುಸ್ಲಿಂ ವಿರೋಧಿ ಎಂಬ ಆರೋಪವನ್ನು ಅಲ್ಲಗಳೆದರು. ಇತರ ಹಿಂದುಳಿದ ವರ್ಗಗಳಿಗೆ ಸೇರುವ ಮುಸ್ಲಿಮರು ಮತ್ತು ಪಸವಂಡಾಗಳಿಗೆ ಈ ಮಸೂದೆ ನೆರವಾಗಲಿದೆ ಎಂದು ಸಮರ್ಥಿಸಿಕೊಂಡರು.