ಫೆಲೆಸ್ತೀನ್ ಮೇಲಿನ ದಾಳಿಯಲ್ಲಿ ಮೈತ್ರಿ: ಅಮೆರಿಕದ ‘ಜುಲೈ ಮಹಿಳೆ’ ಪ್ರಶಸ್ತಿಯನ್ನು ನಿರಾಕರಿಸಿದ ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕಿ ಉಮಾಮಾ ಫತೇಮಾ

ಹೊಸದಿಲ್ಲಿ: ಅಕ್ಟೋಬರ್ 2023ರಿಂದ ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ ಕ್ರೂರ ದಾಳಿಯನ್ನು ನೇರವಾಗಿ ಸಮರ್ಥಿಸುವುದರಿಂದ, ಅಮೆರಿಕ ರಾಜ್ಯ ಇಲಾಖೆಯು ‘ಅಮೆರಿಕ ಅಂತಾರಾಷ್ಟ್ರೀಯ ಧೈರ್ಯವಂತ ಮಹಿಳೆ’ ಕಾರ್ಯಕ್ರಮದ ಭಾಗವಾಗಿ ಕೊಡಮಾಡುವ ‘ಜುಲೈ ಮಹಿಳೆ’ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ ಎಂದು ರವಿವಾರ ರಾತ್ರಿ ಬಾಂಗ್ಲಾದೇಶದ ಸ್ಟೂಡೆಂಟ್ಸ್ ಅಗೆನ್ಸ್ಟ್ ಡಿಸ್ಕ್ರಿಮಿನೇಷನ್ ಸಂಘಟನೆಯ ವಕ್ತಾರೆ ಉಮಾಮಾ ಫತೇಮಾ ಪ್ರಕಟಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಉಮಾಮಾ ಫತೇಮಾ, “ ಬಾಂಗ್ಲಾದೇಶದಲ್ಲಿ ನಡೆದ ಜುಲೈ ಬಂಡಾಯಕ್ಕೆ ನೀಡಿದ ವಿಶೇಷ ಕೊಡುಗೆಯನ್ನು ಪರಿಗಣಿಸಿ, ಅಮೆರಿಕ ರಾಜ್ಯ ಇಲಾಖೆಯು ಮಹಿಳಾ ಹೋರಾಟಗಾರ್ತಿಯರನ್ನು ‘ಅಮೆರಿಕ ಅಂತಾರಾಷ್ಟ್ರೀಯ ಧೈರ್ಯವಂತ ಮಹಿಳೆ, 2025’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಈ ಪುರಸ್ಕಾರದಡಿ ಈ ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲ ಮಹಿಳೆಯರಿಗೂ ‘ಮೆಡೆಲೀನ್ ಆಲ್ ಬ್ರೈಟ್ ಗೌರವಾರ್ಥ ಸಮೂಹ ಪ್ರಶಸ್ತಿ’ಯನ್ನು ಘೋಷಿಸಿದೆ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೊಂದಿಗೆ ಪ್ರಶಸ್ತಿ ಪ್ರಾಧಿಕಾರದ ಅಧಿಕೃತ ಪ್ರಕಟಣೆಯನ್ನೂ ಅವರು ಉಲ್ಲೇಖಿಸಿದ್ದಾರೆ.
ಎಪ್ರಿಲ್ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಿಗದಿಯಾಗಿದ್ದು, ಅಮೆರಿಕ ರಾಜ್ಯ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯ ಟ್ರಂಪ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದೂ ಅವರು ಉಲ್ಲೇಖಿಸಿದ್ದಾರೆ.
“ಮಹಿಳಾ ಹೋರಾಟಗಾರ್ತಿಯರ ಸಾಮೂಹಿಕ ಪುರಸ್ಕಾರ ನಮ್ಮ ಪಾಲಿಗೆ ದೊಡ್ಡ ಗೌರವವಾಗಿದೆ. ಆದರೆ, ಈ ಪ್ರಶಸ್ತಿಯನ್ನು ಅಕ್ಟೋಬರ್ 2023ರಲ್ಲಿ ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ ಕ್ರೂರ ದಾಳಿಯನ್ನು ನೇರವಾಗಿ ಸಮರ್ಥಿಸಲು ಬಳಸಿಕೊಳ್ಳಲಾಗುತ್ತಿದೆ. ಫೆಲೆಸ್ತೀನ್ ನ ಸ್ವಾತಂತ್ರ್ಯ ಹೋರಾಟವನ್ನು ಕಡೆಗಣಿಸಿ, ಇಸ್ರೇಲ್ ದಾಳಿಯನ್ನು ಸಮರ್ಥಿಸುವ ಮೂಲಕ, ಈ ಪ್ರಶಸ್ತಿಯ ತಟಸ್ಥತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಫೆಲೆಸ್ತೀನಿಯನ್ನರ ನೆಲದ ಹಕ್ಕು ಸೇರಿದಂತೆ ಮೂಲಭೂತ ಮಾನವ ಹಕ್ಕುಗಳನ್ನು ಸುದೀರ್ಘ ಕಾಲದಿಂದ ನಿರಾಕರಿಸುತ್ತಾ ಬರಲಾಗಿದೆ. ಫೆಲೆಸ್ತೀನಿಯನ್ನರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ನಾನು ವೈಯಕ್ತಿಕವಾಗಿ ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಜುಲೈ-ಆಗಸ್ಟ್, 2024ರ ನಡುವೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ದಬ್ಬಾಳಿಕೆಯ ವಿರುದ್ಧ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಚಾಲಕ ಶಕ್ತಿಗಳಾಗಿದ್ದ ಧೀರೋದಾತ್ತ ಮಹಿಳೆಯರ ಗುಂಪಿಗೆ ಮೆಡೆಲೀನ್ ಆಲ್ ಬ್ರೈಟ್ ಗೌರವಾರ್ಥ ಪ್ರಶಸ್ತಿಯನ್ನು ನೀಡಲಾಗುತ್ತಿದೆ.