ಅತಿಹೆಚ್ಚು ಅಂತರರಾಷ್ಟ್ರೀಯ ಶಾಲೆ ಹೊಂದಿದ ದೇಶಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ

ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ಕೆಲ ವರ್ಷಗಳ ಹಿಂದೆ ಕೇವಲ ಉಳ್ಳವರ ಸ್ವತ್ತಾಗಿದ್ದ ಅಂತರರಾಷ್ಟ್ರೀಯ ಶಾಲಾ ಶಿಕ್ಷಣ ಇದೀಗ ದೇಶದಲ್ಲಿ ವಿಸ್ತøತ ಹರವನ್ನು ಪಡೆದುಕೊಂಡಿದೆ. ವಿಶ್ವಾದ್ಯಂತ ಗರಿಷ್ಠ ಅಂತರರಾಷ್ಟ್ರೀಯ ಶಾಲೆಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತ ಇದೀಗ ಎರಡನೇ ಸ್ಥಾನದಲ್ಲಿದೆ. ಕೇವಲ ಈ ಹಣೆಪಟ್ಟಿ ಹೊಂದಿರುವ ಸಂಸ್ಥೆಗಳು ಮಾತ್ರವಲ್ಲದೇ ಇವು ಜಾಗತಿಕ ಶಿಕ್ಷಣ ಮಂಡಳಿಗಳಿಗೆ ಸಂಲಗ್ನತ್ವ ಹೊಂದಿವೆ.
ಕಳೆದ ಹಲವು ದಶಕಗಳಿಂದ ಭಾರತದ ಮೂಲೆ ಮೂಲೆಗಳಿಂದ ಮಧ್ಯಮ ವರ್ಗದ ಕುಟುಂಬಗಳು ಕೂಡಾ ಭಾರತೀಯ ಶಿಕ್ಷಣ ಮಂಡಳಿಗಳನ್ನು ತಮ್ಮ ಮಕ್ಕಳು ಅನುಸರಿಸಬೇಕೇ ಅಥವಾ ವಿದೇಶಿ ಪಠ್ಯಕ್ರಮವನ್ನು ಅನುಸರಿಸಬೇಕೇ ಎಂಬ ಚಿಂತನೆ ನಡೆಸುತ್ತಿರುವುದು ಸ್ಪಷ್ಟವಾಗಿದೆ.
ಈ ಶತಮಾನದ ಆರಂಭದಲ್ಲಿ ಭಾರತದಲ್ಲಿ ಕೇವಲ ಎಂಟು ಶಿಕ್ಷಣ ಸಂಸ್ಥೆಗಳು ಐಬಿ ಶಿಕ್ಷಣ ಕೋರ್ಸ್ ನೀಡುತ್ತಿದ್ದವು. ಕ್ಯಾಂಬ್ರಿಡ್ಜ್ ಕೋರ್ಸ್ (ಐಜಿಸಿಎಸ್‍ಇ) ನೀಡುವ ಶಾಲೆಗಳು ಕೂಡಾ ಬೆರಳೆಣಿಕೆಯಲ್ಲಿದ್ದು, ಇವುಗಳ ಅಸ್ತಿತ್ವವನ್ನು ಮಂಡಳಿ ಮಾನ್ಯ ಮಾಡಿರಲಿಲ್ಲ. ಆದರೆ 2011-12ರ ವೇಳೆಗೆ ಕ್ಯಾಂಬ್ರಿಡ್ಜ್ ಇಂಟರ್‍ನ್ಯಾಷನಲ್ ಮತ್ತು ಇಂಟರ್‍ನ್ಯಾಷನಲ್ ಬ್ಯಾಚುಲರೇಟ್ ಕ್ರಮವಾಗಿ 197 ಮತ್ತು 99 ಶಾಲೆಗಳನ್ನು ಹೊಂದಿದ್ದವು.
ಇದೀಗ ಐಎಸ್‍ಸಿ ಸಂಶೋಧನೆಯ ಅಂಕಿ ಅಂಶಗಳ ಪ್ರಕಾರ, ಈ ಸಂಖ್ಯೆ 2019ರಲ್ಲಿ 884 ಹಾಗೂ 2025ರಲ್ಲಿ 972ಕ್ಕೇರಿದೆ. ಅಂದರೆ ಕಳೆದ ಐದು ವರ್ಷದಲ್ಲಿ ವಾರ್ಷಿಕ ಶೇಕಡ 10ರ ಪ್ರಗತಿ ದರ ದಾಖಲಿಸಿದೆ. ಒಟ್ಟು ಅಂತರರಾಷ್ಟ್ರೀಯ ಶಾಲೆಗಳ ಸಂಖ್ಯೆ 14833ಕ್ಕೇರಿದ್ದು, ಶೇಕಡ 8ರ ಪ್ರಗತಿ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಐಜಿಸಿಎಸ್‍ಇ ಶಾಲೆಗಳಿದ್ದು, 210 ಶಾಲೆಗಳು ಐಬಿ ಮಾನ್ಯತೆ ಹೊಂದಿವೆ. ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣದಲ್ಲೂ ಏರಿಕೆ ಪ್ರವೃತ್ತಿ ಕಂಡುಬಂದಿದೆ.
"ಹೆಚ್ಚು ಭಾರತೀಯ ಕುಟುಂಬಗಳು, ವಿದೇಶದಲ್ಲಿ ನೆಲೆಸಿರುವ ಕುಟುಂಬಗಳು ಮತ್ತು ಅನಿವಾಸಿ ಭಾರತೀಯರು ಅಂತರರಾಷ್ಟ್ರೀಯ ಶಾಲೆಗಳಮನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಲ್ಲಿ ಅಂತರರಾಷ್ಟ್ರೀಯ ಶಾಲಾ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆಗಳನ್ನು ಕಾಣುತ್ತಿದ್ದೇವೆ. ಪೋಷಕರ ಆದಾಯ ಹೆಚ್ಚಿರುವುದು ಮತ್ತು ಮಕ್ಕಳ ಭವಿಷ್ಯ ಅಂತರರಾಷ್ಟ್ರೀಯ ಶಿಕ್ಷಣದಿಂದ ಉಜ್ವಲವಾಗುತ್ತದೆ ಹಾಗೂ ಪಾಶ್ಚಿಮಾತ್ಯ ವಿಶ್ವವಿದ್ಯಾನಿಲಯಗಳು ಮತ್ತು ಜಾಗತಿಕ ಅವಕಾಶಗಳ ಬಾಗಿಲು ತೆರೆಯಲು ಇದು ಅನುಕೂಲ ಎನ್ನುವ ಅಭಿಪ್ರಾಯ ಇದಕ್ಕೆ ಕಾರಣ" ಎಂದು ಐಎಸ್‍ಸಿ ರೀಸರ್ಚ್‍ನ ಕ್ಷೇತ್ರ ಸಂಶೋಧನಾ ವ್ಯವಸ್ಥಾಪಕ ಅಭಿಷೇಕ್ ಪಾಂಡೆ ಹೇಳಿದ್ದಾರೆ.