ಶೈಕ್ಷಣಿಕ ಕಲ್ಯಾಣಕ್ಕಿಂತ ರಾಜಕೀಯ ವಿಷಯಗಳಿಗೆ ಆದ್ಯತೆ ನೀಡಲಾಗಿದೆ : ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಟೀಕಿಸಿದ ಸೋನಿಯಾ ಗಾಂಧಿ

Update: 2025-03-31 13:39 IST
ಶೈಕ್ಷಣಿಕ ಕಲ್ಯಾಣಕ್ಕಿಂತ ರಾಜಕೀಯ ವಿಷಯಗಳಿಗೆ ಆದ್ಯತೆ ನೀಡಲಾಗಿದೆ : ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಟೀಕಿಸಿದ ಸೋನಿಯಾ ಗಾಂಧಿ

ಸೋನಿಯಾ ಗಾಂಧಿ | PC : PTI  

  • whatsapp icon

ಹೊಸದಿಲ್ಲಿ: ಶಿಕ್ಷಣ ತಜ್ಞರೊಂದಿಗೆ ಸಮರ್ಪಕ ಸಮಾಲೋಚನೆ ನಡೆಸದೆ ಹಾಗೂ ಶೈಕ್ಷಣಿಕ ಕಲ್ಯಾಣದ ಬದಲು ರಾಜಕೀಯ ವಿಷಯಗಳನ್ನು ಆದ್ಯತೆಯಾಗಿಸಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಹೇರಲಾಗಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.

'The Hindu' ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ಲೇಖನದಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿಯು ಕೇಂದ್ರ ಸರಕಾರದ ಪ್ರಮುಖ ಕಾರ್ಯಸೂಚಿಗಳಾದ ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ ಹಾಗೂ ಕೋಮುವಾದೀಕರಣಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

"ಭಾರಿ ಪ್ರಚಾರದೊಂದಿಗೆ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿ 2020, ಭಾರತದ ಮಕ್ಕಳು ಹಾಗೂ ಯುವಕರ ಶಿಕ್ಷಣದೆಡೆಗೆ ಕೇಂದ್ರ ಸರಕಾರ ಹೊಂದಿರುವ ಭಾರಿ ತಾರತಮ್ಯದ ಮುಸುಕು ಹೊದ್ದುಕೊಂಡಿದೆ. ಶಿಕ್ಷಣದಲ್ಲಿ ಅಧಿಕಾರ ಕೇಂದ್ರೀಕರಣ, ಖಾಸಗಿ ವಲಯಗಳಿಗೆ ಹೊರ ಗುತ್ತಿಗೆ ನೀಡುವ ಮೂಲಕ ವಾಣಿಜ್ಯೀಕರಣ ಹಾಗೂ ಪಠ್ಯಪುಸ್ತಕಗಳು, ಪಠ್ಯ ಕ್ರಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕೋಮುವಾದೀಕರಣಗೊಳಿಸುವ ತನ್ನ ಮೂರು ಮುಖ್ಯ ಕಾರ್ಯಸೂಚಿಗಳ ಜಾರಿ ಕೇಂದ್ರ ಸರಕಾರದ ಆದ್ಯತೆಯಾಗಿರುವುದು ಅದರ ಒಂದು ದಶಕದ ಕಾರ್ಯವೈಖರಿಯಿಂದ ಸಾಬೀತಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹತ್ವದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಾಗ ರಾಜ್ಯ ಸರಕಾರಗಳನ್ನು ಕೈಬಿಡುವ ಮೂಲಕ, ಕೇಂದ್ರ ಸರಕಾರ ಶಿಕ್ಷಣದ ಒಕ್ಕೂಟ ಸ್ವರೂಪವನ್ನು ಕಡೆಗಣಿಸಿದೆ ಎಂದೂ ಅವರು ಆರೋಪಿಸಿದ್ದಾರೆ.

ಕೇಂದ್ರೀಕರಣ ಈ ಸರಕಾರದ ಕಳೆದ 11 ವರ್ಷಗಳ ಕಾರ್ಯವೈಖರಿಯ ಗುಣಲಕ್ಷಣವಾಗಿದೆ. ಆದರೆ, ಇದರಿಂದ ತುಂಬಾ ಅಪಾಯಕಾರಿ ದುಷ್ಪರಿಣಾಮವಾಗಿರುವುದು ಶಿಕ್ಷಣ ವಲಯದ ಮೇಲೆ. ಕೇಂದ್ರ ಶಿಕ್ಷಣ ಸಚಿವರು ಹಾಗೂ ರಾಜ್ಯಗಳ ಶಿಕ್ಷಣ ಸಚಿವರನ್ನೊಳಗೊಂಡ ಕೇಂದ್ರ ಶಿಕ್ಷಣ ಸಲಹಾ ಸಮಿತಿಯ ಸಭೆ 2019ರಿಂದಾಚೆಗೆ ಆಯೋಜನೆಗೊಂಡಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸದೆ, ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಕೇಂದ್ರ ಸರಕಾರ ಏಕಪಕ್ಷೀಯವಾಗಿ ಜಾರಿಗೊಳಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥರೂ ಆದ ಸೋನಿಯಾ ಗಾಂಧಿ, "ಶಿಕ್ಷಣವನ್ನು ತಳಮಟ್ಟದಿಂದ ಮರು ರೂಪಿಸುವ ನೀತಿಯನ್ನು ಪರಿಚಯಿಸಲಾಗಿದ್ದರೂ, ಈ ನೀತಿಯ ಜಾರಿಯ ಕುರಿತು ಕೇಂದ್ರ ಸರಕಾರ ಒಮ್ಮೆಯೂ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸಿಲ್ಲ" ಎಂದು ಟೀಕಿಸಿದ್ದಾರೆ.

ಶಿಕ್ಷಣವು ಸಂವಿಧಾನದ ಸಹವರ್ತಿ ಪಟ್ಟಿಯಡಿ ಬರುತ್ತದೆ ಎಂಬುದರತ್ತ ಬೊಟ್ಟು ಮಾಡಿರುವ ಅವರು, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ನಡುವೆ ದೊಡ್ಡ ಪ್ರಮಾಣದ ಸಹಕಾರವಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕೇಂದ್ರ ಸರಕಾರವು ಪ್ರಜಾತಾಂತ್ರಿಕ ಸಮಾಲೋಚನೆಯನ್ನು ಅಗೌರವಿಸುತ್ತಿದೆ ಹಾಗೂ ವೈವಿಧ್ಯಮಯ ಪ್ರಾದೇಶಿಕ ಭಾವನೆಗಳನ್ನು ಪರಿಗಣಿಸದೆ ನೀತಿಗಳನ್ನು ಹೇರುತ್ತಿದೆ ಎಂದೂ ಅವರು ದೂರಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಿಕೆ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪಗಳ ಕಾರಣಕ್ಕೆ ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರದ ನಡುವೆ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಆದರೆ, ಅವರು ತಮ್ಮ ಅನಿಸಿಕೆಯ ಲೇಖನದಲ್ಲಿ ತಮಿಳುನಾಡನ್ನಾಗಲಿ ಅಥವಾ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತಾಗಲಿ ಏನನ್ನೂ ಉಲ್ಲೇಖಿಸಿಲ್ಲ.

ಇದಕ್ಕೂ ಮುನ್ನ, ತಮಿಳುನಾಡು ಹಿಂದಿ ಹೇರಿಕೆಯನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಲವಾಗಿ ವಿರೋಧಿಸಿತ್ತು. ಆದರೆ, ಈ ವಿಷಯದಲ್ಲಿ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದ ಆಡಳಿತಾರೂಢ ಡಿಎಂಕೆಯ ಮೈತ್ರಿ ಪಕ್ಷವಾದ ಕಾಂಗ್ರೆಸ್, "ಹಿಂದಿಯನ್ನು ವೈಯಕ್ತಿಕವಾಗಿ ಆಸಕ್ತಿ ಹೊಂದಿರುವವರಿಗೆ ಮಾತ್ರ ಕಲಿಸಬಹುದೇ ಹೊರತು, ಹೇರಿಕೆಯ ಮುಖಾಂತರ ಅಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News