ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ | ಕಾನೂನನ್ನು ಗಾಳಿಗೆ ತೂರಲಾಗಿದೆ: ಅಂತರ್ ಸಂಸದೀಯ ಒಕ್ಕೂಟ ಕಳವಳ

Photo : PTI
ಹೊಸದಿಲ್ಲಿ: 2023ರಲ್ಲಿ ಕೃಷ್ಣನಗರದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾರ ಉಚ್ಚಾಟನೆಯ ಕ್ರಮದಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ ಎಂದು ರಾಷ್ಟ್ರೀಯ ಸಂಸತ್ತುಗಳ ಜಾಗತಿಕ ಸಂಘಟನೆಯಾದ ಅಂತರ್ ಸಂಸದೀಯ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.
“ಕಾನೂನಿನಲ್ಲದೆ ಶಿಕ್ಷೆ ನೀಡಬಾರದು ಎಂಬ ಸಾರ್ವತ್ರಿಕ ಹಾಗೂ ಉಲ್ಲಂಘಿಸಲಾಗದ ತತ್ವದಡಿ, ಅಪರಾಧ ನಡೆದ ಸಂದರ್ಭದಲ್ಲಿ ಕಾನೂನಿನ ಅಸ್ತಿತ್ವವಿಲ್ಲದೆ ಯಾವುದೇ ಕೃತ್ಯದ ಭಾಗವಾಗಿ ನಡೆದ ಅಪರಾಧ ಅಥವಾ ಲೋಪವು ಅಪರಾಧವಾಗುವುದಿಲ್ಲ. ನಮಗೆ ದೊರೆತಿರುವ ಮಾಹಿತಿಯ ಹಿನ್ನೆಲೆಯಲ್ಲಿ, ಸಂಸದೆ ಮಹುವಾ ಮೊಯಿತ್ರಾರನ್ನು ಸಂಸತ್ತಿನಿಂದ ಉಚ್ಚಾಟಿಸಿದ ಕ್ರಮದಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ” ಎಂದು ಅಂತರ್ ಸಂಸದೀಯ ಒಕ್ಕೂಟದ ಸಂಸದರ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.
1997ರಲ್ಲಿ ತಾನು ಅಳವಡಿಸಿಕೊಂಡಿರುವ ಪ್ರಜಾಪ್ರಭುತ್ವದ ಕುರಿತ ಜಾಗತಿಕ ಘೋಷಣೆಯನ್ನು ನೆನಪಿಸಿರುವ ಅಂತರ್ ಸಂಸದೀಯ ಒಕ್ಕೂಟ, “ಭ್ರಷ್ಟಾಚಾರ, ಒಳ ಸಂಚು ಹಾಗೂ ವಂಚನೆಯಂತಹ ಗಂಭೀರ ಆರೋಪಗಳ ಕುರಿತು ಉತ್ತರ ಕೋರುವಾಗ ಮಹುವಾ ಮೊಯಿತ್ರಾ ಮಾಡಿದ್ದ ಕಣ್ತಿಪ್ಪಿನ ಕೆಲಸಕ್ಕೆ ಪ್ರತೀಕಾರವಾಗಿ, ಅವರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು. ವಿವಿಧ ವ್ಯಾಪ್ತಿಗಳಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತು ಎಂಬ ಆರೋಪಗಳ ಕುರಿತು ಕಳವಳಗೊಂಡಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದೆ.
ಕಳೆದ ತಿಂಗಳು ಜಿನಿವಾದಲ್ಲಿ ಆಯೋಜನೆಗೊಂಡಿದ್ದ ತನ್ನ 176ನೇ ಸಮಾವೇಶದಲ್ಲಿ ಸಭೆ ನಡೆಸಿದ್ದ ಸಂಸದರ ಮಾನವ ಹಕ್ಕುಗಳ ರಕ್ಷಣಾ ಸಮಿತಿಯು ಈ ನಿರ್ಣಯವನ್ನು ಅಂಗೀಕರಿಸಿದೆ.
“ನರೇಂದ್ರ ಮೋದಿ ಸರಕಾರದ ವಿರುದ್ಧ ನಿರ್ಭೀತ ಧ್ವನಿಯಾಗಿದ್ದ ಹಾಗೂ ಅವರ ಸರಕಾರದ ಆಪ್ತ ಬಂಡವಾಳಶಾಹಿ ನೀತಿಯ ವಿರುದ್ಧ ಆರೋಪಿಸುತ್ತಿದ್ದ ವಿಪಕ್ಷಗಳನ್ನು ಮುನ್ನಡೆಸುತ್ತಿದ್ದ ಮೊದಲ ಬಾರಿಯ ಸಂಸದೆ ಮಹುವಾ ಮೊಯಿತ್ರಾರನ್ನು ಯಾವುದೇ ಕಾನೂನಿನ ಉಲ್ಲಂಘನೆ ಅಥವಾ ಅನ್ವಯವಾಗುವಂಥ ಸಂಸದೀಯ ನಿಯಮಗಳಿಲ್ಲದಿದ್ದರೂ, ಅವರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು” ಎಂಬ ನಿರ್ದಿಷ್ಟ ಕಳವಳವನ್ನು ತನ್ನ ನಾಲ್ಕು ಪುಟಗಳ ವರದಿಯಲ್ಲಿ ಅಂತರ್ ಸಂಸದೀಯ ಒಕ್ಕೂಟ ವ್ಯಕ್ತಪಡಿಸಿದೆ.
ನರೇಂದ್ರ ಮೋದಿಯ ಬಹಿರಂಗ ಟೀಕಾಕಾರರಾಗಿದ್ದ ಹಾಗೂ ಆಯ್ದ ಉದ್ಯಮಿಗಳ ಪರವಾಗಿ ಮೋದಿ ಸರಕಾರ ಪಕ್ಷಪಾತ ಮಾಡುತ್ತಿದೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದ ಮೊದಲ ಬಾರಿಯ ಸಂಸದೆಯಾಗಿದ್ದ ಮಹುವಾ ಮೊಯಿತ್ರಾರನ್ನು ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನ್ಕರ್ ನೇತೃತ್ವದ ನೀತಿ ಸಮಿತಿ ಮಾಡಿದ ಶಿಫಾರಸ್ಸನ್ನು ಆಧರಿಸಿ ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು. ವಕೀಲ ಜೈ ಅನಂತ್ ದೇಹಾದ್ರೈರೊಂದಿಗೆ ನೀತಿ ಸಮಿತಿಗೆ ದೂರು ನೀಡಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹೀರಾನಂದಾನಿಯವರಿಂದ ಮಹುವಾ ಮೊಯಿತ್ರಾ ಲಂಚ ಸ್ವೀಕರಿಸಿದ್ದಾರೆ. ಲೋಕಸಭೆಯ ತಮ್ಮ ಅಧಿಕೃತ ಇಮೇಲ್ ನ ಲಾಗಿನ್ ವಿವರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತು ಉಲ್ಲೇಖಿಸಿರುವ ಅಂತರ್ ಸಂಸದೀಯ ಒಕ್ಕೂಟ, “ಇಂತಹ ಹಿನ್ನೆಲೆಯನ್ನಿಟ್ಟುಕೊಂಡು ಅಸಮರ್ಪಕವಾಗಿ ಉಚ್ಚಾಟಿಸುವ ಕ್ರಮವು ವಿಪಕ್ಷಗಳನ್ನು ಕುಗ್ಗಿಸುವ ಸಾಧ್ಯತೆ ಇದೆ” ಎಂದೂ ಅಭಿಪ್ರಾಯ ಪಟ್ಟಿದೆ.