ಅಪ್ರಾಪ್ತ ವಯಸ್ಸಿನವರಿಗೆ ಶಕ್ತಿ ಪಾನೀಯ ನಿಷೇಧಿಸಲಿರುವ ಪಂಜಾಬ್ ಸರಕಾರ

ಸಾಂದರ್ಭಿಕ ಚಿತ್ರ | PC : freepik.com
ಚಂಡಿಗಢ: ಅಪ್ರಾಪ್ತ ವಯಸ್ಸಿನವರಿಗೆ ಶಕ್ತಿ ಪಾನೀಯಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಪಂಜಾಬ್ ಸರಕಾರ ಸನ್ನದ್ದವಾಗಿದೆ. ಶಾಲೆಯ ಕ್ಯಾಂಟೀನ್, ಶಾಲೆಯ ಸುತ್ತಮುತ್ತಲಿನಲ್ಲಿರುವ ಅಂಗಡಿಗಳು ಸೇರಿದಂತೆ ಮಕ್ಕಳು ಆಗಾಗ ಭೇಟಿ ನೀಡುವ ಸ್ಥಳಗಳಲ್ಲಿ ಈ ಪಾನೀಯಗಳ ಮಾರಾಟ ನಿಷೇಧಿಸಲು ಪಂಜಾಬ್ ಸರಕಾರ ನಿರ್ಧರಿಸಿದೆ.
ಮಾದಕ ವ್ಯಸನ ಶಾಲಾ ಮಟ್ಟದಲ್ಲೇ ಆರಂಭವಾಗುತ್ತದೆ. ತಾನು ವಿವಿಧ ಜಿಲ್ಲೆಗಳ ಶಾಲೆಗಳಿಗೆ ಇತ್ತೀಚೆಗೆ ಭೇಟಿ ನೀಡಿದ ಬಳಿಕ ವಿದ್ಯಾರ್ಥಿಗಳು ಈ ಶಕ್ತಿ ಪಾನೀಯ ಹಾಗೂ ಸ್ಟ್ರಾಬೆರಿ ಕ್ವಿಕ್ (ಸ್ಟ್ರಾಬೆರಿ ಕ್ಯಾಂಡಿಯಂತೆ ಕಾಣುವ ಹರಳು ಮಾದಕ ವಸ್ತು)ಗಳ ವ್ಯಸನಿಗಳಾಗುತ್ತಿರುವುದು ತಿಳಿಯಿತು ಎಂದು ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.
‘‘ಸ್ಟ್ರಾಬೆರಿ ಕ್ವಿಕ್ ಶಾಲೆಗಳ ಸಮೀಪ ಮಾರಾಟವಾದರೆ, ಪ್ರತಿ ಬಾಟಲಿಗೆ ಕೇವಲ 10 ರೂ. ಬೆಲೆ ಇರುವ ಶಕ್ತಿ ಪಾನೀಯಗಳು ಹಲವು ಶಾಲಾ ಕ್ಯಾಂಟೀನ್, ವಿದ್ಯಾರ್ಥಿಗಳು ಆಗಾಗ ಭೇಟಿ ನೀಡುವ ಸ್ಥಳಗಳಲ್ಲಿರುವ ಅಂಗಡಿಗಳಲ್ಲಿ ಮಾರಾಟವಾಗುತ್ತದೆ. ಅವುಗಳ ಮಾರಾಟವನ್ನು ನಿಷೇಧಿಸುವುದಾಗಿ ನಾವು ಖಾತರಿ ನೀಡುತ್ತೇವೆ’’ ಎಂದು ಅವರು ಇಂದು ಹೇಳಿದ್ದಾರೆ.
ಮಾದಕ ವಸ್ತುವಿನ ವಿರುದ್ಧ ರಾಜ್ಯ ಸರಕಾರದ ಹೋರಾಟದ ಮೇಲ್ವಿಚಾರಣೆಗೆ ರೂಪಿಸಲಾದ ಸಂಪುಟ ಸಮಿತಿಯ ಸದಸ್ಯರು ಈ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಡಾ. ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.
ಮಕ್ಕಳಿಗೆ ಶಕ್ತಿ ಪಾನೀಯ ಮಾರಾಟ ಮಾಡುವುದಕ್ಕೆ ನಿಷೇಧ ವಿಧಿಸಲು ಆರೋಗ್ಯ ಸಚಿವರು ಅನುಮತಿ ನೀಡಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಈ ಪಾನೀಯಗಳು ಕೇವಲ ವ್ಯಸನಕಾರಿ ಮಾತ್ರವಲ್ಲದೆ, ಅತ್ಯಧಿಕ ಕೆಫೈನ್ ಹಾಗೂ ಟೌರಿನ್ ಅಂಶಗಳನ್ನು ಒಳಗೊಂಡಿರುವುದರಿಂದ ಅರೋಗ್ಯದ ಮೇಲೆ ಅಪಾಯ ಉಂಟು ಮಾಡುವ ಸಾಧ್ಯತೆ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಔಪಚಾರಿಕ ನೋಟಿಸ್ ನೀಡುವ ಮುನ್ನ, ನಾವು ಇದನ್ನು ತಜ್ಞರಿಂದ ಕಾನೂನು ಬದ್ಧವಾಗಿ ಪರಿಶೀಲಿಸುತ್ತಿದ್ದೇವೆ. ಭಾರತದಲ್ಲಿ ಇಂತಹ ನಿಷೇಧ ಹೇರುತ್ತಿರುವ ಮೊದಲ ರಾಜ್ಯ ಪಂಜಾಬ್ ಆಗಲಿದೆ. ಹೆಚ್ಚಿನ ಮತ್ತು ಪಡೆಯಲು ಮಕ್ಕಳು ಈ ಪಾನೀಯಗಳಿಗೆ ಹೆಚ್ಚು ಹೆಚ್ಚು ವ್ಯಸನಿಗಳಾಗುತ್ತಿದ್ದಾರೆ. ಅನಂತರ ಅವರು ಇತರ ಮಾದಕ ವಸ್ತುಗಳ ವ್ಯಸನಿಗಳಾಗುತ್ತಾರೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತರ ಪಾನೀಯಗಳಿಗೆ ಹೋಲಿಸಿದರೆ, ಈ ಪಾನೀಯಗಳು ಮೂರು ಪಟ್ಟು ಕೆಫೈನ್ ಅಂಶವನ್ನು ಒಳಗೊಂಡಿದೆ. ಇದು ಅನುಮತಿಸಲಾದ ಮಿತಿಗಿಂತ ಅತಿ ಹೆಚ್ಚಾಗಿದೆ. ವಿದೇಶಗಳಲ್ಲಿ ಇಂತಹ ಪಾನೀಯಗಳನ್ನು 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ನಿಷೇಧಿಸಿದ ನಿದರ್ಶನಗಳಿವೆ. ಔಪಚಾರಿಕ ನೋಟಿಸ್ ಜಾರಿಗೊಳಿಸುವ ಮುನ್ನ ಇದನ್ನು ಕಾನೂನು ಬದ್ಧವಾಗಿ ಜಾರಿಗೆ ತರುವ ಕುರಿತು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.