ಆರೋಪಿಗಳ ಮರ್ಮಾಂಗಗಳಿಗೆ ಪೆಟ್ರೋಲ್, ಮೆಣಸಿನ ಪುಡಿ ತುರುಕಿದ ಆರೋಪ: ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಗುಜರಾತ್ ಕೋರ್ಟ್

Photo Credit: iStock
ಸೂರತ್: ದರೋಡೆ ನಡೆಸಿದ ಶಂಕೆಯ ಮೇಲೆ ಬಂಧಿತರಾಗಿದ್ದ ಮೂವರು ಆರೋಪಿಗಳ ಮರ್ಮಾಂಗಗಳಿಗೆ ಪೆಟ್ರೋಲ್, ಮೆಣಸಿನ ಪುಡಿ ತುರುಕಿ, ಅವರನ್ನು ಥಳಿಸಿದ ಮೇಲ್ನೋಟದ ಆರೋಪದ ಮೇಲೆ ಗುಜರಾತ್ ನ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಸೂರತ್ ನ ನ್ಯಾಯಾಲಯವೊಂದು ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದೆ.
ಮಾರ್ಚ್ 26ರಂದು 5ನೇ ಹೆಚ್ಚುವರಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪ್ರಥಮ ದರ್ಜೆಯ ನ್ಯಾಯಾಧೀಶೆ ಶ್ರದ್ಧಾ ಎನ್. ಫಾಲ್ಕಿ ಈ ಆದೇಶ ಹೊರಡಿಸಿದ್ದು, ಮೂವರು ಆರೋಪಿಗಳ ನೀಡಿದ ಹೇಳಿಕೆಯನ್ನು ಆಧರಿಸಿ ಸ್ವಯಂಪ್ರೇರಿತ ಕ್ರಿಮಿನಲ್ ವಿಚಾರಣೆ ನಡೆಸಿದ ನಂತರ, ಆರೋಪಿ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ಸೂಚಿಸಿದ್ದಾರೆ.
ಮೂವರು ಆರೋಪಿಗಳು ಹಾಗೂ ಓರ್ವ ವೈದ್ಯರ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ, ವೈದ್ಯಕೀಯ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸಾಕ್ಷ್ಯಾಧಾರಗಳನ್ನಾಗಿ ಗಮನಕ್ಕೆ ತೆಗೆದುಕೊಂಡಿತು.
ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪಗಳು ಭಾರತೀಯ ನ್ಯಾಯ ಸಂಹಿತೆಯ ಸ್ವಯಂಪ್ರೇರಿತ ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಸೆಕ್ಷನ್ ಗಳಡಿ ಮೇಲ್ನೋಟಕ್ಕೇ ಸಾಬೀತಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ಇದಕ್ಕೂ ಮುನ್ನ, ಸೂರತ್ ನ ಸಚಿನ್ ಪೊಲೀಸ್ ಠಾಣೆಯಲ್ಲಿ ನಮ್ಮ ಕೈಗಳು ಹಾಗೂ ಕಾಲುಗಳಿಗೆ ಬೆಲ್ಟ್ ನಿಂದ ಹೊಡೆಯಲಾಯಿತು ಹಾಗೂ ನಮ್ಮ ಬೆನ್ನುಗಳಿಗೆ ಬಟ್ಟೆ ಸುತ್ತಿದ ದೊಣ್ಣೆಯಿಂದ ಥಳಿಸಲಾಯಿತು ಎಂದು ದರೋಡೆ ಪ್ರಕರಣದ ಮೂವರು ಶಂಕಿತ ಆರೋಪಿಗಳಾದ ಸೌರಭ್ ಶರ್ಮ (19), ರಾಕೇಶ್ ವಾಘ್ (22) ಹಾಗೂ ಸುಬೋಧ್ ರಮಣಿ (23) ಎಂಬುವವರು ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಒಂದು ವೇಳೆ ನ್ಯಾಯಾಲಯಕ್ಕೆ ದೂರು ನೀಡಿದರೆ, ನಿಮ್ಮ ವಿರುದ್ಧ ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹ ಕಾಯ್ದೆ, 2015ರಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೇದೆಗಳಾದ ವನಾರ್, ಜಯಪಾಲ್ ಸಿನ್ಹ್, ನಾರಾಯಣ್ ಸಿನ್ಹ್ ಹಾಗೂ ಪೊಲೀಸ್ ವ್ಯಾನ್ ಚಾಲಕ ಶೈತಾನ್ ಸಿನ್ಹ್ ನಮಗೆ ಬೆದರಿಸಿದ್ದರು ಎಂದೂ ಅವರು ಆರೋಪಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, “ಆರೋಪಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಾದ 115 (2), 351 (2) ಹಾಗೂ 54 ಅಡಿ ಅಪರಾಧವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ” ಎಂದು ಹೇಳಿತು.
ಜನವರಿ 28ರ ರಾತ್ರಿ ಜ್ಞಾನೇಶ್ವರ್ ಸಪ್ಕಾಲ್ ಎಂಬುವವರ 89,820 ರೂ. ಮೌಲ್ಯದ ಚಿನ್ನದ ಪೆಂಡೆಂಟ್ ಹಾಗೂ ಕುತ್ತಿಗೆ ಸರವನ್ನು ಅಪಹರಿಸಿದ ಆರೋಪದ ಮೇಲೆ ಈ ಮೂವರು ಸಂತ್ರಸ್ತರನ್ನು ಬಂಧಿಸಲಾಗಿತ್ತು.