ಸ್ವಯಂಘೋಷಿತ ಕ್ರಿಶ್ಚಿಯನ್ ಧರ್ಮಗುರು ಮೇಲೆ ಮತ್ತಿಬ್ಬರು ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪ

ಬಿಜೀಂದರ್ ಸಿಂಗ್ x.com/AskAnshul
ಅಮೃತಸರ: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಸ್ವಯಂಘೋಷಿತ ಕ್ರಿಶ್ಚಿಯನ್ ಧರ್ಮಗುರು ಬಿಜೀಂದರ್ ಸಿಂಗ್ ಎಂಬಾತನಿಗೆ ಮೊಹಾಲಿ ನ್ಯಾಯಾಲಯ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಶನಿವಾರ ಮತ್ತಿಬ್ಬರು ಮಹಿಳೆಯರು ಈತನ ವಿರುದ್ಧ ಹೊಸ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದಾರೆ.
ಅಕಾಲಿ ತಕ್ತ್ ನ ಅಧಿಕಾರ ನಡೆಸುತ್ತಿರುವ ಗ್ಯಾನಿ ಕುಲದೀಪ್ ಸಿಂಗ್ ಗರ್ಗಾಜ್ ಅವರನ್ನು ಭೇಟಿ ಮಾಡಿದ ಈ ಇಬ್ಬರು ಮಹಿಳೆಯರು ಈ ಮಾಹಿತಿ ನೀಡಿದ್ದಾರೆ. ಪಾಸ್ಟರ್ ಮತ್ತು ಧರ್ಮ ಪ್ರವರ್ತಕ ಎಂದು ಘೋಷಿಸಿಕೊಂಡಿರುವ ಬಿಜೀಂದರ್, ತನ್ನ ದೇರಾ (ಕಾನ್ವೆಂಟ್) ದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಅಕಾಲಿ ತಕ್ತ್ ನ ಕಾರ್ಯಾಲಯ ಹೊರಡಿಸಿದ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಈ ಸಂಬಂಧ ಪಂಜಾಬ್ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನೂ ಅಕಾಲಿ ತಕ್ತ್ ದೃಢಪಡಿಸಿದೆ.
ಎಫ್ಐಆರ್ ದಾಖಲಿಸಿದ ಬಳಿಕವೂ ಪಾಸ್ಟರ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದ ಕಾರಣ ತಮಗೆ ಬೆದರಿಕೆ ಹಾಕಲಾಗುತ್ತಿತ್ತು ಮತ್ತು ದಾಳಿ ನಡೆದಿತ್ತು ಎಂದು ಮಹಿಳೆಯರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ನೆರವಿಗಾಗಿ ಅಕಾಲಿ ತಕ್ತ್ ಗೆ ಮನವಿ ಮಾಡಿಕೊಂಡಿದ್ದಾಗಿ ವಿವರಿಸಿದ್ದಾರೆ.
ಪಾಸ್ಟರ್ ವಿರುದ್ಧದ ಆರೋಪದಲ್ಲಿ ಕ್ರಮ ಕೈಗೊಳ್ಳುವಲ್ಲಿ ಆಗಿರುವ ವಿಳಂಬದ ಬಗ್ಗೆ ಆತಂಕ ವ್ಯಕ್ತಪಡಿಸಿದ ತಕ್ತ್, ಆರೋಪಿ ವಿರುದ್ಧ ತಕ್ಷಣ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸರ್ಕಾರವನ್ನು ಆಗ್ರಹಿಸಿದೆ. ಜತೆಗೆ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಪಾಸ್ಟರ್ ವಿರುದ್ಧ ದೂರು ನೀಡಲು ಮುಂದೆ ಬಂದ ಮಹಿಳೆಯರ ಸಾಹಸವನ್ನು ಶ್ಲಾಘಿಸಿದ ಜತೇದಾರ್ ಗ್ಯಾನಿ ಕುಲದೀಪ್ ಸಿಂಗ್, ಅವರಿಗೆ ಎಲ್ಲ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ಗುರುಸಾಹಿಬ್ ನಲ್ಲಿ ನಂಬಿಕೆ ಇಡುವಂತೆ ಮಹಿಳೆಯರಿಗೆ ಸಲಹೆ ಮಾಡಿದ್ದಾರೆ.