ಕ್ಲಿನಿಕಲ್ ಟ್ರಯಲ್‌ಗಾಗಿ ಮೊದಲ ದೇಶಿ ನಿರ್ಮಿತ ಎಂಆರ್‌ಐ ಸ್ಕ್ಯಾನರ್ ಸ್ಥಾಪನೆಗೆ ಏಮ್ಸ್-ದಿಲ್ಲಿ ಸಜ್ಜು

Update: 2025-03-26 21:40 IST
ಕ್ಲಿನಿಕಲ್ ಟ್ರಯಲ್‌ಗಾಗಿ ಮೊದಲ ದೇಶಿ ನಿರ್ಮಿತ ಎಂಆರ್‌ಐ ಸ್ಕ್ಯಾನರ್ ಸ್ಥಾಪನೆಗೆ ಏಮ್ಸ್-ದಿಲ್ಲಿ ಸಜ್ಜು

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ಭಾರತವು ತನ್ನ ಮೊದಲ ದೇಶಿ ನಿರ್ಮಿತ ಎಂಆರ್‌ಐ ಸ್ಕ್ಯಾನರ್‌ನ್ನು ಅಭಿವೃದ್ಧಿಗೊಳಿಸಿದ್ದು, ಅದನ್ನು ಕ್ಲಿನಿಕಲ್ ಟ್ರಯಲ್‌ ಗಳು ಮತ್ತು ಮೌಲ್ಯಮಾಪನಕ್ಕಾಗಿ ಅಕ್ಟೋಬರ್‌ನಲ್ಲಿ ಏಮ್ಸ್-ದಿಲ್ಲಿಯಲ್ಲಿ ಸ್ಥಾಪಿಸಲಾಗುವುದು.

ದೇಶೀಯವಾಗಿ ನಿರ್ಮಿತ ಸ್ಕ್ಯಾನರ್ ಎಂಆರ್‌ಐ ತಪಾಸಣೆಗಳ ವೆಚ್ಚವನ್ನು ಮತ್ತು ಆಮದು ಯಂತ್ರಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲಿದೆ. ತಪಾಸಣೆಗಳ ವೆಚ್ಚವೂ ಶೇ.೫೦ರಷ್ಟು ಕಡಿಮೆಯಾಗಲಿದೆ.

1.5 ಟೆಸ್ಲಾ ಎಂಆರ್‌ಐ ಸ್ಕ್ಯಾನರ್ ಸ್ಥಾಪನೆಗಾಗಿ ಏಮ್ಸ್-ದಿಲ್ಲಿ ಕೇಂದ್ರ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುವ ಮುಂಬೈನ ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಆ್ಯಂಡ್ ರೀಸರ್ಚ್ (SAMEER) ಜೊತೆ ಒಡಂಬಡಿಕೆಗೆ ಸಹಿ ಹಾಕಿದೆ.

ಭಾರತದಲ್ಲಿ ನಿರ್ಣಾಯಕ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ, ಐಸಿಯುಗಳು, ರೋಬೊಟಿಕ್ಸ್, ಎಂಆರ್‌ಐಗಳಲ್ಲಿ ಹೆಚ್ಚಿನ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಏಮ್ಸ್-ದಿಲ್ಲಿ ನಿರ್ದೇಶಕ ಡಾ.ಎಂ.ಶ್ರೀನಿವಾಸ್ ತಿಳಿಸಿದರು.

ದೇಶೀಯ ಎಂಆರ್‌ಐ ಸ್ಕ್ಯಾನರ್‌ನ್ನು ಅಭಿವೃದ್ಧಿಗೊಳಿಸಿರುವುದು ವಿದೇಶಗಳಿಂದ ಆಮದಿತ ಸಾಧನಗಳ ಮೇಲೆ ಅವಲಂಬನೆಯನ್ನು ತಗ್ಗಿಸಲು ಆತ್ಮನಿರ್ಭರ ಭಾರತದತ್ತ ಪ್ರಮುಖ ಹೆಜ್ಜೆಯಾಗಿದೆ ಎಂದರು.

ಎಂಆರ್‌ಐ ಸ್ಕ್ಯಾನರ್‌ಗಳು ಭಾರತದಲ್ಲಿ ತಯಾರಾಗುವುದಿಲ್ಲ, ಹೀಗಾಗಿ ಸದ್ಯ ದೇಶದಲ್ಲಿ ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮತ್ತು ಮೌಲ್ಯಮಾಪನಕ್ಕೆ ಯಾವುದೇ ಕಾರ್ಯವಿಧಾನವಿಲ್ಲ. ನಾವು ಸಿದ್ಧಪಡಿಸಿರುವ ಯಂತ್ರವನ್ನು ಏಮ್ಸ್-ದಿಲ್ಲಿಯಲ್ಲಿ ಕ್ಲಿನಿಕಲ್ ಟ್ರಯಲ್‌ಗೆ ಒಳಪಡಿಸಲಾಗುತ್ತದೆ ಮತ್ತು ಇದು ಯಶಸ್ವಿಯಾಗುವ ಭರವಸೆಯಿದೆ ಎಂದು SAMEER ಮಹಾ ನಿರ್ದೇಶಕ ಪಿ.ಎಚ್.ರಾವ್ ಹೇಳಿದರು.

ಪ್ರಯೋಗಗಳ ಸಮಯದಲ್ಲಿಯೂ ರೋಗಿಗಳ ಮೇಲೆ ಎಂಆರ್‌ಐ ಸ್ಕ್ಯಾನರ್ ಬಳಕೆಗೆ ಅನುಮತಿ ನೀಡಲು ಅದರ ಮೌಲ್ಯಮಾಪನಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಮಾನದಂಡಗಳನ್ನು ರೂಪಿಸುತ್ತಿದೆ.

ಕ್ಲಿನಿಕಲ್ ಮತ್ತು ಮಾನವ ಟ್ರಯಲ್‌ ಗಳನ್ನು ಆರಂಭಿಸಲು ಅನುಮತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ರಾವ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News