ಮಹಾರಾಷ್ಟ್ರ | ಮಸೀದಿಗೆ ನುಗ್ಗಿ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿದ ದುಷ್ಕರ್ಮಿಗಳು; ಆರೋಪಿಗಳಾದ ವಿಜಯ್ ರಾಮ ಗವ್ಹಾನೆ, ಶ್ರೀರಾಮ್ ಅಶೋಕ್ ಬಂಧನ

Update: 2025-03-30 19:02 IST
ಮಹಾರಾಷ್ಟ್ರ | ಮಸೀದಿಗೆ ನುಗ್ಗಿ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿದ ದುಷ್ಕರ್ಮಿಗಳು; ಆರೋಪಿಗಳಾದ ವಿಜಯ್ ರಾಮ ಗವ್ಹಾನೆ, ಶ್ರೀರಾಮ್ ಅಶೋಕ್ ಬಂಧನ

ಬಂಧಿತ ಆರೋಪಿಗಳು (Photo credit: X@zoo_bear)

  • whatsapp icon

ಮುಂಬೈ: ವ್ಯಕ್ತಿಯೊಬ್ಬ ಅಕ್ರಮವಾಗಿ ಮಸೀದಿಗೆ ಪ್ರವೇಶಿಸಿ ಅಲ್ಲಿ ಜಿಲೆಟಿನ್ ಕಡ್ಡಿಗಳಿಟ್ಟಿದ್ದು, ಅದು ಸ್ಫೋಟಗೊಂಡಿರುವ ಘಟನೆ ರವಿವಾರ ಮುಂಜಾನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಮುಂಜಾನೆ ಸುಮಾರು 2.30ರ ವೇಳೆಗೆ ಜಿಯೊರಾಯಿ ತಾಲ್ಲೂಕಿನ ಆರ್ಧಾ ಮಾಸ್ಲಾ ಗ್ರಾಮದಲ್ಲಿ ಸಂಭವಿಸಿದ ಈ ಸ್ಫೋಟ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಜಿಲೆಟಿನ್ ಕಡ್ಡಿಗಳ ಸ್ಫೋಟದಿಂದ ಮಸೀದಿಯ ಕಟ್ಟಡದ ಒಳ ಭಾಗ ಹಾನಿಗೊಳಗಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ವಿಜಯ್ ರಾಮ ಗವ್ಹಾನೆ (22) ಹಾಗೂ ಶ್ರೀರಾಮ್ ಅಶೋಕ್ ಸಗ್ಡೆ (24) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬೆನ್ನಿಗೇ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ತಡೆಯಲು ಗ್ರಾಮದಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂಭಾಗದಿಂದ ಮಸೀದಿಯನ್ನು ಪ್ರವೇಶಿಸಿರುವ ವ್ಯಕ್ತಿಯೊಬ್ಬ, ಅಲ್ಲಿ ಕೆಲವು ಜಿಲೆಟಿನ್ ಕಡ್ಡಿಗಳನ್ನು ಇಟ್ಟಿದ್ದು, ನಂತರ ಅವು ಸ್ಫೋಟಗೊಂಡಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆಯ ಕುರಿತು ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ತಲವಾಡ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೆ, ಬೀಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಅವರೊಂದಿಗೆ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ವಿಧಿ ವಿಜ್ಞಾನ ತಂಡಗಳೂ ಸ್ಥಳಕ್ಕೆ ಧಾವಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಸೀದಿಯ ಒಳಗೆ ಸಂಭವಿಸಿದ ಸ್ಫೋಟದ ಸಂಬಂಧ ಬೀಡ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರ ವಿರುದ್ಧ ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಅಲ್ಲದೆ, ಯಾವುದೇ ವದಂತಿಗಳನ್ನು ಹರಡಬಾರದು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದೂ ಅವರು ಜನರಿಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News