ಸೋನಿಯಾ ಗಾಂಧಿ ವಿರುದ್ಧ ಆಧಾರ ರಹಿತ ಆರೋಪ; ಅಮಿತ್ ಶಾ ಅವರಿಗೆ ಜೈರಾಮ್ ರಮೇಶ್ ನೋಟಿಸ್

ಅಮಿತ್ ಶಾ , ಜೈರಾಮ್ ರಮೇಶ್ | PTI
ಹೊಸದಿಲ್ಲಿ: ರಾಷ್ಟ್ರೀಯ ಪ್ರಧಾನ ಮಂತ್ರಿ ಪರಿಹಾರ ನಿಧಿ (ಎನ್‌ಪಿಎಂಆರ್‌ಎಫ್) ಕಾರ್ಯನಿರ್ವಹಣೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಹೆಸರು ಕೆಡಿಸಲು ಉದ್ದೇಶಪೂರ್ವಕ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
ಸೋನಿಯಾ ಗಾಂಧಿ ವಿರುದ್ಧದ ಅಮಿತ್ ಶಾ ಅವರ ಹೇಳಿಕೆ ಸ್ಪಷ್ಟವಾಗಿ ಸುಳ್ಳು, ಮಾನ ಹಾನಿಕರ ಹಾಗೂ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಆದುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಆಗ್ರಹಿಸಿದ್ದಾರೆ.
ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆ, 2024ರ ಕುರಿತ ಚರ್ಚೆಗೆ ತನ್ನ ಪ್ರತಿಕ್ರಿಯೆ ನೀಡುವ ಸಂದರ್ಭ ಅಮಿತ್ ಶಾ ಅವರು ನೀಡಿದ ಹೇಳಿಕೆಯನ್ನು ಜೈರಾಮ್ ರಮೇಶ್ ಅವರು ಉಲ್ಲೇಖಿಸಿದರು. ಚರ್ಚೆಯ ಸಂದರ್ಭ ಅಮಿತ್ ಶಾ ಅವರು ಎನ್‌ಪಿಎಂಆರ್‌ಎಫ್ ಅನ್ನು ಕಾಂಗ್ರೆಸ್ ಆಡಳಿತದ ಸಂದರ್ಭ ಸ್ಥಾಪಿಸಲಾಯಿತು. ಪಿಎಂ-ಕೇರ್ ಅನ್ನು ನರೇಂದ್ರ ಮೋದಿ ಸರಕಾರದ ಸಂದರ್ಭ ಸ್ಥಾಪಿಸಲಾಯಿತು ಎಂದು ಹೇಳಿದ್ದರು.
‘‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿಧಿಯನ್ನು ಕುಟುಂಬವೊಂದು ನಿಯಂತ್ರಿಸುತ್ತಿತ್ತು. ಕಾಂಗ್ರೆಸ್ ಅಧ್ಯಕ್ಷೆ ಈ ಸಮಿತಿಯ ಸದಸ್ಯರಾಗಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸರಕಾರದ ನಿಧಿಯ ಭಾಗವಾಗಿದ್ದರು. ನಾವು ಜನರಿಗೆ ಏನು ಉತ್ತರ ನೀಡುವುದು? ಇದನ್ನು ಯಾರೂ ಓದಲಾರರು, ಯಾರೂ ಗಮನಿಸಲಾರರು ಎಂದು ಅವರು ಭಾವಿಸಿದ್ದರು’’ ಎಂದು ಅಮಿತ್ ಶಾ ರಾಜ್ಯ ಸಭೆಯಲ್ಲಿ ಮಂಗಳವಾರ ಹೇಳಿದ್ದರು.