ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸುಪ್ರೀಂನಿಂದ ರಾಷ್ಟ್ರೀಯ ಕಾರ್ಯ ಪಡೆ ರಚನೆ

ಸುಪ್ರೀಂ | PC : PTI
ಹೊಸದಿಲ್ಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಪುನರಾವರ್ತಿತ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಗಮನಕ್ಕೆ ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸಮಸ್ಯೆ ಪರಿಹರಿಸಲು ಹಾಗೂ ಇಂತಹ ಘಟನೆಗಳನ್ನು ತಡೆಯಲು ರಾಷ್ಟ್ರೀಯ ಕಾರ್ಯ ಪಡೆ (ಎನ್‌ಟಿಎಫ್)ಯನ್ನು ರೂಪಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಆರ್. ಮಹಾದೇವನ್ ಅವರ ಪೀಠ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ದಿಲ್ಲಿ ಐಐಟಿಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಎಫ್‌ಐಆರ್ ದಾಖಲಿಸುವಂತೆ ಹಾಗೂ ತನಿಖೆ ನಡೆಸುವಂತೆ ದಿಲ್ಲಿ ಪೊಲೀಸರಿಗೆ ಸೋಮವಾರ ನಿರ್ದೇಶಿಸಿದೆ.
ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವರದಿಯಾಗುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಯ ‘‘ಆಘಾತಕಾರಿ ಮಾದರಿ’’ಯನ್ನು ಗಮನಿಸಿದ ಪೀಠ, ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತೆ ಪ್ರಚೋದಿಸುವ ವಿವಿಧ ಅಂಶಗಳನ್ನು ಪರಿಹರಿಸಲು ಹೆಚ್ಚು ಸುದೃಢ, ಸಮಗ್ರ ಹಾಗೂ ಜವಾಬ್ದಾರಿಯುತ ವ್ಯವಸ್ಥೆಯ ತುರ್ತು ಅಗತ್ಯತೆಯನ್ನು ಈ ದುರಂತಗಳು ಪ್ರತಿಪಾದಿಸಿವೆ ಎಂದು ತಿಳಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಪುನರಾವರ್ತಿತ ನಿದರ್ಶನಗಳು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಈಗಿರುವ ಕಾನೂನು ಹಾಗೂ ಸಾಂಸ್ಥಿಕ ನಿಯಮಗಳು ಅಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಇಲ್ಲದೇ ಇರುವುದನ್ನು ನೆನಪಿಸಿದೆ ಎಂದು ಪೀಠ ಹೇಳಿದೆ.