ಬಾಂಗ್ಲಾ ಮುಖ್ಯ ಸಲಹೆಗಾರರಿಗೆ ಪತ್ರ ಬರೆದ ಮೋದಿ ವಿಮೋಚನಾ ದಿನದ ಬಗ್ಗೆ ಹೇಳಿದ್ದೇನು?

PC: x.com/NDTVWORLD
ಹೊಸದಿಲ್ಲಿ: ಬಾಂಗ್ಲಾದೇಶ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರಿಗೆ ಪತ್ರ ಬರೆದು ಶುಭ ಹಾರೈಸಿದ್ದಾರೆ. ಉಭಯ ದೇಶಗಳ ಹಿತಾಸಕ್ತಿ ಮತ್ತು ಕಳಕಳಿಯ ದೃಷ್ಟಿಯಿಂದ ಪರಸ್ಪರ ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸುವ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ಥಾಯ್ಲೆಂಡ್ ನಲ್ಲಿ ನಡೆಯಲಿರುವ ಬಿಮ್ ಸ್ಟೆಕ್ ಶೃಂಗದಲ್ಲಿ ಪ್ರಥಮ ಬಾರಿಗೆ ಪರಸ್ಪರ ಭೇಟಿ ಮಾಡಲಿರುವ ಒಂದು ವಾರ ಮೊದಲು ಬೆಳವಣಿಗೆ ನಡೆದಿದೆ. ಕಳೆದ ವರ್ಷ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಭಾರತದ ಜತೆ ಸ್ನೇಹದಿಂದ ಇದ್ದ ಶೇಕ್ ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿ, ಯೂನುಸ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
"ರಾಷ್ಟ್ರೀಯ ದಿನಾಚರಣೆಯು ಉಭಯ ದೇಶಗಳ ದ್ವಿಪಕ್ಷೀಯ ಪಾಲುದಾರಿಕೆಗೆ ಅಡಿಪಾಯ ಎನಿಸಿದ ಪರಸ್ಪರ ಹಂಚಿಕೊಂಡಿರುವ ಇತಿಹಾಸ ಮತ್ತು ತ್ಯಾಗದ ಪ್ರತೀಕ. ಬಾಂಗ್ಲಾದೇಶ ವಿಮೋಚನಾ ಯುದ್ಧದ ಸ್ಫೂರ್ತಿ, ಹಲವು ಕ್ಷೇತ್ರಗಳಲ್ಲಿಸಮೃದ್ಧವಾಗಿ ಬೆಳೆದಿರುವ ಮತ್ತು ನಮ್ಮ ಜನತೆಗೆ ಲಾಭ ತರುವ ನಮ್ಮ ಸಂಬಂಧಕ್ಕೆ ಮಾರ್ಗದರ್ಶಿ ದೀಪವಾಗಿ ಮುಂದುವರಿಯಲಿದೆ" ಎಂದು ಮೋದಿ ಹೇಳಿದ್ದಾರೆ.
"ಪರಸ್ಪರ ದೇಶಗಳ ಹಿತಾಸಕ್ತಿ ಮತ್ತು ಕಳಕಳಿಗೆ ಪರಸ್ಪರ ಸಂವೇದನಾಶೀಲತೆ ಆಧಾರದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಇರುವ ಸಮಾನ ಆಕಾಂಕ್ಷೆಯನ್ನು ಆಧರಿಸಿದ ಈ ಪಾಲುದಾರಿಕೆಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ಉಭಯ ಮುಖಂಡರು ಏಪ್ರಿಲ್ 3-4ರಂದು ಬ್ಯಾಂಕಾಕ್ನಲ್ಲಿ ನಡೆಯುವ ಬಿಮ್ಸ್ಟೆಕ್ ಶೃಂಗದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶ ದ್ವಿಪಕ್ಷೀಯ ಸಭೆಗೆ ಕೋರಿದ್ದು, ಭಾರತ ಈ ವಿಷಯದಲ್ಲಿ ಮೌನವಾಗಿದೆ.