ಹುಟ್ಟುಹಬ್ಬದ ಸಂಭ್ರಮ ಬಳಿಕ ಆತ್ಮಹತ್ಯೆ ಮಾಡಿಕೊಂಡ ಐಐಐಟಿ ವಿದ್ಯಾರ್ಥಿ

ಲಕ್ನೋ: ಅಲಹಾಬಾದ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ (ಐಐಐಟಿ-ಎ) ವಿದ್ಯಾರ್ಥಿಯೊಬ್ಬ ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿಯ ಜತೆ ವಿಡಿಯೊ ಕರೆ ಮಾಡಿ ಮಾತನಾಡಿದ ಬಳಿಕ ಶನಿವಾರ ಮಧ್ಯರಾತ್ರಿ 12ರವರೆಗೂ ಮೆಸೇಜ್ ಮಾಡುತ್ತಿದ್ದ ವಿದ್ಯಾರ್ಥಿ, ಹಾಸ್ಟೆಲ್‍ನ ಐದನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ.
ವಾಕ್ ಮತ್ತು ಶ್ರವಣ ದೋಷ ಹೊಂದಿದ್ದ ಬಿಟೆಕ್ ವಿದ್ಯಾರ್ಥಿ, ತೆಲಂಗಾಣದ ನಿಜಾಮಾಬಾದ್ ಮೂಲದವನು. ಮಾಹಿತಿ ತಂತ್ರಜ್ಞಾನದ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ. ಜೆಇಇಯಲ್ಲಿ 52ನೇ ರ್ಯಾಂಕ್ ಪಡೆದು ಐಐಐಟಿ-ಎ ಪ್ರವೇಶ ಪಡೆದಿದ್ದ.
ಮಧ್ಯರಾತ್ರಿ ದೊಡ್ಡ ಸದ್ದು ಕೇಳಿ ಹಾಸ್ಟೆಲ್‍ನ ಇತರ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದರು. ತಕ್ಷಣವೇ ಆಡಳಿತ ವರ್ಗದವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಸ್ವರೂಪ್‍ರಾಣಿ ನೆಹರೂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಹಪಾಠಿಗಳು, ದುರಂತಕ್ಕೆ ಸಂಸ್ಥೆಯ ಆಡಳಿತವೇ ಹೊಣೆ ಎಂದು ಆಪಾದಿಸಿದ್ದಾರೆ. ಮೊದಲ ಸೆಮಿಸ್ಟರ್‍ನ ಆರು ವಿಷಯಗಳಲ್ಲಿ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದ ಎನ್ನಲಾಗಿದ್ದು, ಇದು ಹತಾಶೆಗೆ ಕಾರಣ ಎಂದು ಹೇಳಲಾಗಿದೆ. ಕಳೆದ ಮೂರು ತಿಂಗಳಿಂದ ತರಗತಿಗೆ ಹಾರಾಗುತ್ತಿರಲಿಲ್ಲ ಎಂದು ಹೇಳಲಾಗಿದೆ.