ವಕ್ಫ್ ಮಸೂದೆಗೆ ಪಕ್ಷ ಬೆಂಬಲ ಖಂಡಿಸಿ ಇಬ್ಬರು ಜೆಡಿಯು ನಾಯಕರ ರಾಜೀನಾಮೆ

Update: 2025-04-03 21:41 IST
ವಕ್ಫ್ ಮಸೂದೆಗೆ ಪಕ್ಷ ಬೆಂಬಲ ಖಂಡಿಸಿ ಇಬ್ಬರು ಜೆಡಿಯು ನಾಯಕರ ರಾಜೀನಾಮೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (PTI)

  • whatsapp icon

ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಪಕ್ಷ ನೀಡಿದ ಬೆಂಬಲದಿಂದ ಅಸಮಾಧಾನಗೊಂಡಿರುವ ಪಕ್ಷದ ಇಬ್ಬರು ಹಿರಿಯ ನಾಯಕರಾದ ಮುಹಮ್ಮದ್ ಕಾಸಿಂ ಅನ್ಸಾರಿ ಹಾಗೂ ಮುಹಮ್ಮದ್ ನವಾಝ್ ಮಲಿಕ್ ಗುರುವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾದರೂ, NDA ಮಿತ್ರ ಪಕ್ಷವಾದ ಜೆಡಿಯು ಬೆಂಬಲದೊಂದಿಗೆ ನಿನ್ನೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿತು.

ತಮ್ಮ ರಾಜೀನಾಮೆ ನಿರ್ಧಾರದ ಕುರಿತು ಜೆಡಿಯು ಪಕ್ಷದ ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಮುಹಮ್ಮದ್ ಕಾಸಿಂ ಅನ್ಸಾರಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವ ಪಕ್ಷದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ, ಜೆಡಿಯು ಪಕ್ಷವನ್ನು ಜಾತ್ಯತೀಯ ಮೌಲ್ಯಗಳ ರಕ್ಷಕ ಎಂದು ಭಾವಿಸಿದ್ದ ಹಲವಾರು ಭಾರತೀಯ ಮುಸ್ಲಿಮರ ವಿಶ್ವಾಸ ಮುರಿದು ಬಿದ್ದಿದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

“ಪಕ್ಷಕ್ಕಾಗಿ ಹಲವಾರು ವರ್ಷಗಳನ್ನು ತ್ಯಾಗ ಮಾಡಿದ ನನಗೆ ಇದರಿಂದ ಹೃದಯ ಒಡೆದಂತಾಗಿದೆ” ಎಂದು ಅವರು ತಮ್ಮ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

“ನೀವು ಪರಿಶುದ್ಧ ಜಾತ್ಯತೀತ ಸಿದ್ಧಾಂತದ ಸಂಕೇತ ಎಂದು ನನ್ನಂತಹ ಲಕ್ಷಾಂತರ ಭಾರತೀಯ ಮುಸ್ಲಿಮರು ಅಚಲ ವಿಶ್ವಾಸ ಹೊಂದಿದ್ದೆವು. ಆದರೆ, ಈಗ ಈ ವಿಶ್ವಾಸ ಮುರಿದು ಬಿದ್ದಿದೆ. ಜೆಡಿಯು ಪಕ್ಷದ ಈ ನಡೆಯಿಂದ ಲಕ್ಷಾಂತರ ಅರ್ಪಣಾ ಮನೋಭಾವದ ಭಾರತೀಯ ಮುಸ್ಲಿಮರು ಹಾಗೂ ನನ್ನಂತಹ ಕಾರ್ಯಕರ್ತರಿಗೆ ತೀವ್ರ ಆಘಾತವಾಗಿದೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯು ಭಾರತೀಯ ಮುಸ್ಲಿಮರ ವಿರುದ್ಧವಿದ್ದು, ಅದನ್ನು ಯಾವುದೇ ಸನ್ನಿವೇಶದಲ್ಲೂ ಒಪ್ಪಲು ಸಾಧ್ಯವಿಲ್ಲ ಎಂದೂ ಅನ್ಸಾರಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

“ಈ ಮಸೂದೆಯು ಸಂವಿಧಾನದ ಹಲವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಮಸೂದೆಯು ಭಾರತೀಯ ಮುಸ್ಲಿಮರನ್ನು ಅವಮಾನಿಸಿದ್ದರೂ, ನೀವಾಗಲಿ ಅಥವಾ ನಿಮ್ಮ ಪಕ್ಷವಾಗಲಿ ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ನಾನು ನನ್ನ ಜೀವನದ ಹಲವಾರು ವರ್ಷಗಳನ್ನು ಪಕ್ಷಕ್ಕಾಗಿ ತ್ಯಾಗ ಮಾಡಿದೆ ಎಂಬ ಬಗ್ಗೆ ನನಗೆ ವಿಷಾದವಾಗುತ್ತಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಮತ್ತೊಂದೆಡೆ, ಜೆಡಿಯು ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ನವಾಝ್ ಕೂಡಾ ಪಕ್ಷಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದು, ಪಕ್ಷವು ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿರುವುದರ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಿತೀಶ್ ಕುಮಾರ್ ಗೆ ರಾಜೀನಾಮೆ ಪತ್ರ ರವಾನಿಸಿರುವ ಮುಹಮ್ಮದ್ ನವಾಝ್ ಮಲಿಕ್, “ನೀವು ಪರಿಶುದ್ಧ ಜಾತ್ಯತೀತ ಸಿದ್ಧಾಂತದ ಸಂಕೇತ ಎಂದು ಲಕ್ಷಾಂತರ ಭಾರತೀಯ ಮುಸ್ಲಿಮರು ನಿಮ್ಮ ಬಗ್ಗೆ ಅಚಲ ವಿಶ್ವಾಸವಿಟ್ಟುಕೊಂಡಿದ್ದರು. ಆದರೆ, ಇದೀಗ ಆ ವಿಶ್ವಾಸ ಮುರಿದು ಬಿದ್ದಿದೆ. ಮಸೂದೆಯು ಲಕ್ಷಾಂತರ ಅರ್ಪಣಾ ಮನೋಭಾವದ ಭಾರತೀಯ ಮುಸ್ಲಿಮರು ಹಾಗೂ ನನ್ನಂತಹ ಕಾರ್ಯಕರ್ತರಿಗೆ ತೀವ್ರ ಘಾಸಿಯನ್ನುಂಟು ಮಾಡಿದೆ. ಲೋಕಸಭೆಯಲ್ಲಿ ಲಲನ್ ಸಿಂಗ್ ಮಾತನಾಡಿದ ರೀತಿ ಹಾಗೂ ಮಸೂದೆಯನ್ನು ಬೆಂಬಲಿಸಿದ ರೀತಿಯಿಂದ ನಮ್ಮ ಹೃದಯ ಒಡೆದು ಹೋಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ವಕ್ಫ್ ಮಸೂದೆಯು ಭಾರತೀಯ ಮುಸ್ಲಿಮರ ವಿರುದ್ಧವಿದೆ. ನಾವಿದನ್ನು ಯಾವುದೇ ಸನ್ನಿವೇಶದಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಮಸೂದೆಯು ಸಂವಿಧಾನದ ಹಲವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಮಸೂದೆಯ ಮೂಲಕ ಭಾರತೀಯ ಮುಸ್ಲಿಮರನ್ನು ಅವಮಾನಿಸಲಾಗಿದೆ. ಇದನ್ನು ನೀವಾಗಲಿ ಅಥವಾ ನಿಮ್ಮ ಪಕ್ಷವಾಗಲಿ ಅರ್ಥ ಮಾಡಿಕೊಳ್ಳಲಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ ಮಸೂದೆಯನ್ನು ಸಮರ್ಥಿಸಿಕೊಂಡ ಮರು ದಿನ ಈ ಬೆಳವಣಿಗೆ ನಡೆದಿದೆ. ನಿನ್ನೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದ ರಾಜೀವ್ ರಂಜನ್ ಸಿಂಗ್, ಈ ಮಸೂದೆಯು ಪಾರದರ್ಶಕತೆ ತರುವ ಹಾಗೂ ಮುಸ್ಲಿಂ ಸಮುದಾಯದ ಎಲ್ಲ ವರ್ಗಗಳ ಕಲ್ಯಾಣವನ್ನು ಖಾತರಿಗೊಳಿಸುವ ಉದ್ದೇಶ ಹೊಂದಿದೆ. ಈ ಮಸೂದೆಯನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿದ್ದು, ಈ ಆರೋಪಗಳು ಸುಳ್ಳು” ಎಂದು ಮಸೂದೆ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News