ಪಾತಾಳಕ್ಕೆ ಕುಸಿದ ಸ್ಟಾರ್ ಇನ್ಶೂರೆನ್ಸ್ ಕಂಪನಿ; ಎರಡು ತಿಂಗಳಲ್ಲಿ 25% ಮೌಲ್ಯ ನಷ್ಟ

PC: x.com/bsindia
ಹೊಸದಿಲ್ಲಿ: ಷೇರು ಮಾರುಕಟ್ಟೆಯ ಬುಧವಾರದ ವಹಿವಾಟಿನಲ್ಲಿ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿಯ ಷೇರು ಮೌಲ್ಯ ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಷೇರು ಮೌಲ್ಯ 339.85 ರೂಪಾಯಿ ಆಗಿದೆ. ಈ ಮೂಲಕ ಒಂದೇ ದಿನದಲ್ಲಿ ಷೇರು ಮೌಲ್ಯ ಶೇಕಡ 2ರಷ್ಟು ಕುಸಿದಂತಾಗಿದೆ. ಕಳೆದ ಮೂರು ದಿನಗಳಲ್ಲಿ ಷೇರು ಮೌಲ್ಯ ಶೇಕಡ 7ರಷ್ಟು ಕುಸಿದಿದ್ದು, ಕಳೆದ ಎರಡು ತಿಂಗಳಲ್ಲಿ ಶೇಕಡ 25ರಷ್ಟು ಇಳಿಕೆ ಕಂಡಿದೆ.
ಭಾರತದ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಂಪನಿಯ ಕ್ಲೇಮ್ ಇತ್ಯರ್ಥ ಕ್ರಮದಲ್ಲಿನ ಲೋಪಗಳು ಇದಕ್ಕೆ ಪ್ರಮುಖ ಕಾರಣ ಎಂದು ಗುರುತಿಸಿದೆ. ಜತೆಗೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವ ಸಾದ್ಯತೆಯೂ ಇದೆ.
ಆದರೆ ಉದ್ಯಮ ಅನುಸರಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಸಾಮಾನ್ಯ ಪ್ರಕ್ರಿಯೆ ಎಂದು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಸಮರ್ಥಿಸಿಕೊಂಡಿದೆ.
ಕಂಪನಿಯ ಷೇರು ಮೌಲ್ಯ ಎರಡು ತಿಂಗಳಲ್ಲಿ ಶೇಕಡ 25ರಷ್ಟು ಕುಸಿತ ಕಂಡಿದ್ದು, 2024ರ ಸೆಪ್ಟೆಂಬರ್ 9ರಂದು ಕಂಪನಿಯ ಷೇರು ಮೌಲ್ಯ 647.65 ರೂಪಾಯಿ ತಲುಪಿತ್ತು. ಅದಕ್ಕೆ ಹೋಲಿಸಿದರೆ ಶೇಕಡ 47ರಷ್ಟು ಮೌಲ್ಯ ಕುಸಿದಂತಾಗಿದೆ. ಷೇರು ಬಿಡುಗಡೆಯ ವೇಳೆ ಪ್ರತಿ ಷೇರಿನ ಮೌಲ್ಯ 900 ರೂಪಾಯಿ ಆಗಿತ್ತು. ಇದಕ್ಕೆ ಹೋಲಿಸಿದರೆ ಶೇಕಡ 62ರಷ್ಟು ಕಡಿಮೆ. 2021ರ ಡಿಸೆಂಬರ್ 10ರಂದು ಸ್ಟಾರ್ ಹೆಲ್ತ್ ಇನ್ಶೂರೆನ್ಸ್, ಷೇರು ಮಾರುಕಟ್ಟೆ ಪ್ರವೇಶಿಸಿತ್ತು.
"ಮಾಸ್ಟರ್ ಸುತ್ತೋಲೆಯ ಚೌಕಟ್ಟಿನಲ್ಲಿ ನಿಯಂತ್ರಣಾತ್ಮಕ ಮೇಲ್ವಿಚಾರಣೆ ಅಂಗವಾಗಿ ಐಆರ್‍ಡಿಎಐ ನಿಯತವಾಗಿ ಪರಿಶೋಧನೆ ಮಾಡುತ್ತಿದೆ. ಈ ಮೌಲ್ಯಮಾಪನ ಉದ್ಯಮದ ಅನುಸರಣೆಯನ್ನು ಖಾತರಿಪಡಿಸುವ ಸಾಮಾನ್ಯ ಪ್ರಕ್ರಿಯೆಯಾಗಿದೆ" ಎಂದು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪ್ರಕಟಣೆಯಲ್ಲಿ ಹೇಳಿದೆ.