ಆಂಧ್ರಪ್ರದೇಶ: ಡಿಜಿಪಿ ಕಚೇರಿ ಬಳಿ ಮಹಿಳೆಯ ಬರ್ಬರ ಹತ್ಯೆ

ಸಾಂದರ್ಭಿಕ ಚಿತ್ರ
ಗುಂಟೂರು: ವಿಜಯವಾಡಾ-ಗುಂಟೂರು ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಆಂಧ್ರಪ್ರದೇಶ ಪೋಲಿಸ್ ಮಹಾ ನಿರ್ದೇಶಕ(ಡಿಜಿಪಿ)ರ ಕಚೇರಿ ಸಮೀಪ 33ರ ಹರೆಯದ ಮಹಿಳೆಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೋಲಿಸ್ ಅಧಿಕಾರಿಯೋರ್ವರು ಸೋಮವಾರ ತಿಳಿಸಿದರು.
ಕೊಲೆಯಾಗಿರುವ ಮಹಿಳೆಯನ್ನು ಮೂಲತಃ ಪ್ರಕಾಶಂ ಜಿಲ್ಲೆಯ ಪಾಮುರು ಪಟ್ಟಣದವಳಾಗಿದ್ದು, ಹಾಲಿ ವಿಜಯವಾಡಾದ ರಾಣಿಗಾರಿ ಥೋಟ ನಿವಾಸಿ ಲಕ್ಷ್ಮಿ ತಿರುಪತಿಯಮ್ಮ ಎಂದು ಗುರುತಿಸಲಾಗಿದೆ. ಆಕೆಗೆ ಇಬ್ಬರು ಮಕ್ಕಳಿದ್ದು, ಲೈಂಗಿಕ ಕಾರ್ಯಕರ್ತೆಯಾಗಿದ್ದಳು ಎನ್ನಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಮಹಿಳೆಯ ಕತ್ತನ್ನು ಸೀಳಲಾಗಿದೆ ಮತ್ತು ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಲಕ್ಷಣಗಳು ಕಂಡು ಬಂದಿವೆ. ರವಿವಾರ ರಾತ್ರಿ 7:30 ಮತ್ತು 8 ಗಂಟೆಯ ನಡುವೆ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಿಂದ ಕೆಲವು ಸಾಕ್ಷ್ಯಾಧಾರಗಳನ್ನೂ ಸಂಗ್ರಹಿಸಲಾಗಿದೆ ಎಂದರು.
ಗುಂಟೂರು ಜಿಲ್ಲೆಯ ಕೊಲನುಕೊಂಡ ಗ್ರಾಮದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 300 ಯಾರ್ಡ್ ದೂರದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.