ಭಾರತದಿಂದ ವಲಸೆ ಹೋಗಲು ಬಯಸುತ್ತಿರುವ ಪ್ರತಿ ಐವರಲ್ಲಿ ಒಬ್ಬರು ಆಗರ್ಭ ಶ್ರೀಮಂತರು: ಸಮೀಕ್ಷಾ ವರದಿ

ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ಭಾರತದಲ್ಲಿನ ಜೀವನ ಮಟ್ಟ, ವಿದೇಶಗಳಲ್ಲಿನ ಉತ್ತಮ ಜೀವನ ದರ್ಜೆ ಹಾಗೂ ಇನ್ನಿತರ ದೇಶಗಳಲ್ಲಿರುವ ಸುಗಮ ವ್ಯಾವಹಾರಿಕ ಪರಿಸರದ ಕಾರಣಕ್ಕೆ ಶೇ. 22ರಷ್ಟು ಆಗರ್ಭ ಶ್ರೀಮಂತ ಭಾರತೀಯರು ಭಾರತದಿಂದ ವಲಸೆ ಹೋಗಲು ಬಯಸುತ್ತಿದ್ದಾರೆ ಎಂದು ಬುಧವಾರ ಬಿಡುಗಡೆಯಾಗಿರುವ ಸಮೀಕ್ಷಾ ವರದಿಯೊಂದರಲ್ಲಿ ಹೇಳಲಾಗಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ 150 ಮಂದಿ ಆಗರ್ಭ ಶ್ರೀಮಂತ ಭಾರತೀಯರು, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಕೆನಡಾ ಹಾಗೂ ಯುಎಇಯಲ್ಲಿನ ಗೋಲ್ಡನ್ ವೀಸಾ ಯೋಜನೆಯಿಂದಾಗಿ, ಈ ದೇಶಗಳಲ್ಲಿ ನಮ್ಮ ಪಾಲಿಗೆ ಅಚ್ಚುಮೆಚ್ಚಿನ ವಾಸ್ತವ್ಯದ ತಾಣಗಳಾಗಿವೆ ಎಂದು ಹೇಳಿದ್ದಾರೆ.
ಇವೈ ಕನ್ಸಲ್ಟೆನ್ಸಿ ಸಹಯೋಗದೊಂದಿಗೆ ದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಿರುವ ಮುಂಚೂಣಿ ಸಂಪತ್ತು ನಿರ್ವಹಣಾ ಸಂಸ್ಥೆಯಾದ ಕೋಟಕ್ ಪ್ರೈವೇಟ್, ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರತಿ ವರ್ಷ 2.5 ಲಕ್ಷ ಭಾರತೀಯರು ಇನ್ನಿತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದೆ.
“ಪ್ರತಿ ಐವರು ಆಗರ್ಭ ಶ್ರೀಮಂತ ಭಾರತೀಯರ ಪೈಕಿ ಓರ್ವ ಆಗರ್ಭ ಶ್ರೀಮಂತರು ವಿದೇಶಗಳಿಗೆ ವಲಸೆ ಹೋಗುವ ಪ್ರಕ್ರಿಯೆ ಅಥವಾ ಯೋಜನೆಯಲ್ಲಿದ್ದಾರೆ“ ಎಂದು ಸಮೀಕ್ಷೆಯ ಶೋಧನೆಯಲ್ಲಿ ಹೇಳಲಾಗಿದೆ. ಈ ಪೈಕಿ ಬಹುತೇಕರು ಭಾರತೀಯ ಪೌರತ್ವವನ್ನು ಉಳಿಸಿಕೊಂಡೇ ತಮ್ಮ ಆಯ್ಕೆಯ ಅತಿಥಿ ದೇಶದಲ್ಲಿ ಖಾಯಂ ಆಗಿ ನೆಲೆಸುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಲಾಗಿದೆ.
ವಿದೇಶಗಳಿಗೆ ವಲಸೆ ಹೋಗಲು ಮುಂದಾಗಿರುವವರು ಜೀವನ ಮಟ್ಟ, ಆರೋಗ್ಯ ಸೇವೆ ಪರಿಹಾರಗಳು, ಶಿಕ್ಷಣ ಅಥವಾ ಜೀವನ ಶೈಲಿಯಲ್ಲಿ ಸುಧಾರಣೆಯನ್ನು ಬಯಸುತ್ತಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಈ ಪೈಕಿ ಮೂರನೆ ಎರಡರಷ್ಟು ಮಂದಿ ತಾವು ವಲಸೆ ಹೋಗಲು ವ್ಯಾವಹಾರಿಕ ಕಾರ್ಯಾಚರಣೆಗಳು ಸುಗಮವಾಗುವುದು ಪ್ರಮುಖ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಲಸೆಯ ನಿರ್ಣಯವನ್ನು ಭವಿಷ್ಯದ ಹೂಡಿಕೆ ಎಂದು ಬಣ್ಣಿಸಿರುವ ಸಮೀಕ್ಷೆಯು, ತಮ್ಮ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ದೊರೆಯುವ ಸಾಧ್ಯತೆಯು ಅವರು ಇಂತಹ ಆಯ್ಕೆಯನ್ನು ಮಾಡಿಕೊಳ್ಳಲು ಕಾರಣವಾಗಿದೆ ಎಂದೂ ಹೇಳಿದೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ನ ಅಧ್ಯಕ್ಷೆ ಗೌತಮಿ ಗಾವಂಕರ್, ಈ ವಲಸೆಯ ನಿರ್ಣಯವನ್ನು ದೇಶದಿಂದ ಬಂಡವಾಳದ ಹೊರ ಹರಿವು ಎಂಬಂತೆ ನೋಡಬಾರದು ಎಂದು ಅಭಿಪ್ರಾಯ ಪಟ್ಟಿದ್ದು, ಇಂತಹ ಚಟುವಟಿಕೆಗಳ ಮೇಲಿನ ನಿರ್ಬಂಧಗಳು ಒಂದು ವೇಳೆ ಯಾವುದೇ ವ್ಯಕ್ತಿ ತನ್ನ ವಾಸ್ತವ್ಯವನ್ನು ಬದಲಿಸಿದರೂ, ನಗದು ಹೊರ ಹರಿವು ಆಗದಂತೆ ಖಾತರಿ ಪಡಿಸುತ್ತವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ನೆಲೆಸಿರುವ ಭಾರತೀಯ ಪ್ರಜೆಯೊಬ್ಬರು ಪ್ರತಿ ವರ್ಷ 2,50,000 ಅಮೆರಿಕನ್ ಡಾಲರ್ ಅನ್ನು ಮಾತ್ರ ದೇಶದಿಂದ ಹೊರಗೊಯ್ಯಬಹುದಾಗಿದೆ. ಇದೇ ವೇಳೆ ಅನಿವಾಸಿ ಭಾರತೀಯರು ವರ್ಷಕ್ಕೆ ಒಂದು ದಶಲಕ್ಷ ಅಮೆರಿಕನ್ ಡಾಲರ್ ಅನ್ನು ಹೊರಗೊಯ್ಯಲು ಅವಕಾಶ ನೀಡಲಾಗಿದೆ. ಇದರಿಂದಾಗಿ, ಬಂಡವಾಳದ ಹೊರ ಹರಿವು ಆಗದಂತೆ ಖಾತರಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉದ್ಯಮಿಗಳು ಅಥವಾ ಅವರ ವಾರಸುದಾರರು ವಿದೇಶಗಳಿಗೆ ವಲಸೆ ಹೋಗಲು ತೋರುವ ಉತ್ಸುಕತೆಗಿಂತ ವೃತ್ತಿಪರರು ವಿದೇಶಗಳಿಗೆ ವಲಸೆ ಹೋಗಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿರುವ ಸಮೀಕ್ಷೆಯು, ಆಗರ್ಭ ಶ್ರೀಮಂತ ಭಾರತೀಯರ ಪೈಕಿ 36-40 ನಡುವಿನ ವಯೋಮಾನ ಹಾಗೂ 61 ವರ್ಷಕ್ಕೆ ಮೇಲ್ಪಟ್ಟ ವ್ಯಕ್ತಿಗಳು ವಿದೇಶಗಳಿಗೆ ವಲಸೆ ಹೋಗಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದೂ ತಿಳಿಸಿದೆ.
2023ರಲ್ಲಿ ಆಗರ್ಭ ಶ್ರೀಮಂತ ಭಾರತೀಯರು ಎಂದು ಗುರುತಿಸಲಾಗಿದ್ದ 2.83 ಲಕ್ಷ ಭಾರತೀಯರಿದ್ದರು. ಈ ಪೈಕಿ ಪ್ರತಿಯೊಬ್ಬರ ಬಳಿ ಸರಾಸರಿ 25 ಕೋಟಿ ರೂ. ನಿವ್ವಳ ಆಸ್ತಿಯಿದ್ದರೆ, ಅವರೆಲ್ಲರ ಒಟ್ಟಾರೆ ಆಸ್ತಿ ಮೌಲ್ಯವು 2.83 ಲಕ್ಷ ಕೋಟಿಯಷ್ಟಿತ್ತು ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. 2028ರ ವೇಳೆಗೆ ಈ ಆಗರ್ಭ ಶ್ರೀಮಂತ ಭಾರತೀಯರ ಸಂಖ್ಯೆಯು 4.3 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದ್ದು, ಅವರೆಲ್ಲರ ಒಟ್ಟು ಆಸ್ತಿ ಮೌಲ್ಯವು 359 ಲಕ್ಷ ಕೋಟಿ ರೂ. ಆಗಲಿದೆ ಎಂದು ಸಮೀಕ್ಷಾ ವರದಿಯಲ್ಲಿ ಅಂದಾಜಿಸಲಾಗಿದೆ.
ಅತಿಯಾದ ಬಳಕೆ, ಭೌಗೋಳಿಕತೆ ಹಾಗೂ ಬಲಿಷ್ಠ ಆರ್ಥಿಕ ಬೆಳವಣಿಗೆಯು ಈ ವಲಯದ ಬೆಳವಣಿಗೆಗೆ ನೆರವು ನೀಡಿವೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ವೆಚ್ಚವಾರು ನಿಟ್ಟಿನಲ್ಲಿ, ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ನಂತರ, ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರಮುಖ ವಲಯವಾಗಿ ಉದ್ಭವಿಸಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದ್ದು, ಈ ಪ್ರವರ್ಗದಡಿ ವೆಚ್ಚವನ್ನು ಹೆಚ್ಚಳ ಮಾಡಿರುವುದಾಗಿ ಶೇ. 81ರಷ್ಟು ಮಂದಿ ಹೇಳಿದ್ದಾರೆ ಎಂದೂ ತಿಳಿಸಲಾಗಿದೆ.