ಅಕ್ರಮ ಆಸ್ತಿ ಗಳಿಕೆ: ಮಾಜಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ವಿರುದ್ಧ ದೂರು

ಹೊಸದಿಲ್ಲಿ : ಮಾಜಿ ಕೇಂದ್ರ ಸಹಾಯಕ ಗ್ರಾಮೀಣಾಭಿವೃದ್ಧಿ ಸಚಿವೆ ಹಾಗೂ ಸಂಸದೆ ಸಾಧ್ವಿ ನಿರಂಜನ ಜ್ಯೋತಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪಗಳ ಕುರಿತು ತನಿಖೆಗೆ ಒತ್ತಾಯಿಸಿ ಮಾಜಿ ಐಎಎಸ್ ಅಧಿಕಾರಿ ಹಾಗೂ ಹಾಲಿ ರಾಜಕಾರಣಿ ಅಮಿತಾಭ್ ಠಾಕೂರ್ ಅವರು ಲೋಕಪಾಲಕ್ಕೆ ದೂರು ಸಲ್ಲಿಸಿದ್ದಾರೆ.
ಫತೇಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುಖಲಾಲ ಪಾಲ್ ಅವರು ಮಾಡಿರುವ ಆರೋಪದ ಬೆನ್ನಲ್ಲೇ ಈ ದೂರು ಸಲ್ಲಿಕೆಯಾಗಿದೆ. ಪಾಲ್ ವಿರುದ್ಧದ 50 ಲಕ್ಷ ರೂ.ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ಬಿಜೆಪಿ ತನಿಖೆಯನ್ನು ನಡೆಸಿತ್ತು. ಜ್ಯೋತಿ ಸೇರಿದಂತೆ ಇತರ ಬಿಜೆಪಿ ನಾಯಕರು ತನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದ ಪಾಲ್, ವಹಿವಾಟಿನಲ್ಲಿ ಅವರ ಕೈವಾಡವೂ ಇತ್ತು ಎಂದು ಆಪಾದಿಸಿದ್ದರು.
ತನ್ನ ದೂರಿಗೆ ಬೆಂಬಲವಾಗಿ ಠಾಕೂರ್ ಅವರು ಜ್ಯೋತಿಯವರ 2014, 2019 ಮತ್ತು 2024ರ ಚುನಾವಣಾ ಅಫಿಡವಿಟ್‌ಗಳನ್ನು ಸಲ್ಲಿಸಿದ್ದು,2014ರಲ್ಲಿ ಕೇವಲ 25 ಲಕ್ಷ ರೂ.ಗಳಿದ್ದ ಅವರ ಒಟ್ಟು ಆಸ್ತಿಯ ಮೌಲ್ಯ 2024ರಲ್ಲಿ 1.9 ಕೋಟಿ ರೂ.ಗೇರಿದೆ ಮತ್ತು ಈ ಹತ್ತು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯ ಕೇವಲ 57 ಲಕ್ಷ ರೂ.ಗಳಾಗಿವೆ ಎಂದು ಬೆಟ್ಟು ಮಾಡಿದ್ದಾರೆ.
ಇದು ತುಂಬ ಅನುಮಾನಾಸ್ಪದವಾಗಿದೆ ಎಂದು ಬಣ್ಣಿಸಿರುವ ಠಾಕೂರ್,ಈ ಬಗ್ಗೆ ತನಿಖೆ ನಡೆಸುವಂತೆ ಲೋಕಪಾಲಕ್ಕೆ ಆಗ್ರಹಿಸಿದ್ದಾರೆ.