ವಕ್ಫ್ ತಿದ್ದುಪಡಿ ಮಸೂದೆ ಕುರಿತು ಚರ್ಚಿಸಲು ಇಂದು ಸರ್ವಪಕ್ಷಗಳ ಸಂಸದರ ಸಭೆ ಕರೆದ ಕೇಂದ್ರ

ಸಾಂದರ್ಭಿಕ ಚಿತ್ರ (credit: PTI)
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆ, 2024ರ ಕುರಿತು ಚರ್ಚಿಸಲು ಕೇಂದ್ರ ಸರಕಾರ ಇಂದು ಸರ್ವಪಕ್ಷಗಳ ಲೋಕಸಭಾ ಸಂಸದರ ಸಭೆಯನ್ನು ಕರೆದಿದೆ. ಈ ಸಭೆಯು ಸಂಸತ್ ಭವನದ ಸಮಾಲೋಚನಾ ಕೊಠಡಿ ಸಂಖ್ಯೆ 5ರಲ್ಲಿ ಬೆಳಗ್ಗೆ 9.30 ಗಂಟೆಯಿಂದ 10.30 ಗಂಟೆಯವರೆಗೆ ಆಯೋಜನೆಗೊಂಡಿದ್ದು, ವಕ್ಫ್ ಕಾನೂನಿಗೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಗಳ ಕುರಿತು ಸಂಸದರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಒಂದು ಗಂಟೆ ಸಮಯವನ್ನು ಒದಗಿಸಲಾಗಿದೆ.
ಮಸೂದೆಯ ವಿರುದ್ಧ ವಿರೋಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕೂ ಮುನ್ನ, ಮಸೂದೆಯ ನಿಯಮಗಳ ಕುರಿತು ಸ್ಪಷ್ಟನೆ ನೀಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಪ್ರಸ್ತಾವಿತ ತಿದ್ದುಪಡಿಗಳು ವಿವಾದ ಸೃಷ್ಟಿಸಿದ್ದು, ಕೇಂದ್ರ ಸರಕಾರವು ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಹಲವಾರು ಸಂಘಟನೆಗಳು ಆರೋಪಿಸಿವೆ.
ಜಮಾಅತ್ ಉಲೆಮಾ-ಇ-ಹಿಂದ್ ಸೇರಿದಂತೆ ಹಲವಾರು ಮುಸ್ಲಿಂ ಸಂಘಟನೆಗಳು ಪ್ರಸ್ತಾವಿತ ತಿದ್ದುಪಡಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಈ ತಿದ್ದುಪಡಿಗಳಿಂದ ವಕ್ಫ್ ಆಸ್ತಿಗಳ ದುರ್ಬಳಕೆಯಾಗುವ ಸಾಧ್ಯತೆ ಇದೆ ಹಾಗೂ ಮುಸ್ಲಿಂ ಸಮುದಾಯವು ತನ್ನ ದತ್ತಿಯನ್ನು ನಿರ್ವಹಿಸುವ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿವೆ. ಈ ಸಂಬಂಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಬೃಹತ್ ಪ್ರತಿಭಟನೆಗಳ ಯೋಜನೆಯನ್ನು ಪ್ರಕಟಿಸಿದ್ದು, ಮಾರ್ಚ್ 26ರಂದು ಪಟ್ನಾದ ಗರ್ದಾನಿಬಾಗ್ ಹಾಗೂ ಮಾರ್ಚ್ 29ರಂದು ವಿಜಯವಾಡದಲ್ಲಿ ಪ್ರತಿಭಟನೆಗಳು ನಿಗದಿಯಾಗಿವೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಖಂಡಿಸಿರುವ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಖಾಸಿಂ ರಸೂಲ್ ಇಲ್ಯಾಸ್, ಮಸೂದೆಯು ಕೋಮವಾದಿಯಾಗಿದ್ದು, ಮಸೂದೆಯನ್ನು ಪರಾಮರ್ಶೆಗೊಳಪಡಿಸುವಾಗ ಜಂಟಿ ಸದನ ಸಮಿತಿಯು ವಿರೋಧ ಪಕ್ಷಗಳು ಹಾಗೂ ಮುಸ್ಲಿಂ ಸಂಘಟನೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
31 ಸದಸ್ಯ ಬಲದ ಜಂಟಿ ಸದನ ಸಮಿತಿಯು ವಕ್ಫ್ ಮಸೂದೆಯ ಪ್ರಸ್ತಾವಿತ ತಿದ್ದುಪಡಿಗಳನ್ನು ಅನುಮೋದಿಸಿದ್ದು, ಈ ನಿರ್ಣಯಕ್ಕೆ ಸಮಿತಿಯಲ್ಲಿದ್ದ ಬಿಜೆಪಿಯ 15 ಸಂಸದರು ಬೆಂಬಲ ನೀಡಿದ್ದರೆ, ವಿರೋಧ ಪಕ್ಷಗಳ 11 ಸಂಸದರು ವಿರೋಧ ದಾಖಲಿಸಿದ್ದರು. ಹೀಗಾಗಿ, ಮುಸ್ಲಿಂ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಗಳ ಮೇಲೆ ಈ ಮಸೂದೆಯಿಂದಾಗಲಿರುವ ಪರಿಣಾಮಗಳ ಕುರಿತು ವಿರೋಧ ಪಕ್ಷಗಳ ನಾಯಕರು ಭಿನ್ನಮತ ವ್ಯಕ್ತಪಡಿಸಿದ್ದಾರೆ.