"ಸೂಕ್ಷ್ಮತೆಯ ಕೊರತೆ": ಸ್ತನಗಳನ್ನು ಸ್ಪರ್ಶಿಸುವುದು ಅತ್ಯಾಚಾರ ಯತ್ನವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

Photo credit: PTI
ಹೊಸದಿಲ್ಲಿ: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸ್ತನಗಳನ್ನು ಸ್ಪರ್ಶಿಸುವುದು ಅತ್ಯಾಚಾರದ ಯತ್ನವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದೇಶದಲ್ಲಿ ಸಂಪೂರ್ಣವಾಗಿ ಸೂಕ್ಷ್ಮತೆಯ ಕೊರತೆ ಕಂಡು ಬರುತ್ತಿದೆ ಎಂದು ಹೇಳಿದೆ.
ಸ್ತನಗಳನ್ನು ಸ್ಪರ್ಶಿಸುವುದು, ಪೈಜಾಮನ್ನು ಎಳೆಯುವುದು ಅತ್ಯಾಚಾರದ ಪ್ರಯತ್ನಕ್ಕೆ ಸಮನಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿತ್ತು.
ಈ ಕುರಿತು ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರ ನೇತೃತ್ವದ ಪೀಠವು, ಕೆಲವು ಅವಲೋಕನಗಳನ್ನು ನೋಡಿ ನೋವುಂಟು ಮಾಡಿದೆ ಮತ್ತು ಈ ವಿಷಯದ ಬಗ್ಗೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳಿಂದ ಉತ್ತರವನ್ನು ಕೇಳಿದೆ.
ತೀರ್ಪು ಬರೆದವರಲ್ಲಿ ಸಂಪೂರ್ಣವಾಗಿ ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತದೆ ಎಂದು ಹೇಳಲು ನಮಗೆ ಕಷ್ಟವಾಗುತ್ತಿದೆ. ತೀರ್ಪು ಆ ಕ್ಷಣದಲ್ಲಿ ಬಂದಿಲ್ಲ. ತೀರ್ಪನ್ನು ಕಾಯ್ದಿರಿಸಿದ ನಾಲ್ಕು ತಿಂಗಳ ನಂತರ ನೀಡಲಾಗಿರುವುದರಿಂದ ಮನಸ್ಸಿಗೆ ಬಂದಂತೆ ತೀರ್ಪು ನೀಡಲಾಗಿದೆ. ನಾವು ಸಾಮಾನ್ಯವಾಗಿ ಈ ಹಂತದಲ್ಲಿ ತಡೆ ನೀಡಲು ಹಿಂಜರಿಯುತ್ತೇವೆ. ಆದರೆ ಅಮಾನವೀಯವಾಗಿ ಕಾಣುವುದರಿಂದಾಗಿ ನಾವು ಈ ತೀರ್ಪನ್ನು ತಡೆಹಿಡಿಯುತ್ತೇವೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ವೀ ವುಮೆನ್ ಆಫ್ ಇಂಡಿಯಾ' ಎಂಬ ಸಂಘಟನೆಯು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ ನಂತರ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಈ ವಿಷಯವನ್ನು ವಿಚಾರಣೆ ನಡೆಸುತ್ತಿದೆ. ಸಂತ್ರಸ್ತೆಯ ತಾಯಿ ಕೂಡ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
2021ರಲ್ಲಿ ಉತ್ತರ ಪ್ರದೇಶದಲ್ಲಿ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿತ್ತು. ಆರೋಪಿಗಳು ಆಕೆಯ ಸ್ತನವನ್ನು ಹಿಡಿದು ಪೈಜಾಮಾನ್ನು ಎಳೆದು ತುಂಡರಿಸಿದ್ದರು. ಆಕೆಯನ್ನು ಕಾಲುವೆಯೆಡೆ ಎಳೆದೊಯ್ಯಲು ಕೂಡಾ ಯತ್ನಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ "ಇದು ಅತ್ಯಾಚಾರವಲ್ಲ, ಇದು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ಯತ್ನ" ಎಂದು ಹೇಳಿದ್ದರು.