ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತವಾಗಿರುತ್ತಾರೆ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್

Update: 2025-03-26 12:08 IST
Photo of Yogi Adityanath

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (Photo: PTI)

  • whatsapp icon

ಹೊಸದಿಲ್ಲಿ: ರಾಜ್ಯದಲ್ಲಿ ಎಲ್ಲ ಧರ್ಮದವರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತವಾಗಿರುತ್ತಾರೆ ಎಂದೂ ಹೇಳಿದ್ದಾರೆ.

ANI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಆದಿತ್ಯನಾಥ್, “ನಾನು ಯೋಗಿಯಾಗಿದ್ದು, ಎಲ್ಲರ ಸಂತೋಷವನ್ನು ಬಯಸುತ್ತೇನೆ. ಒಂದು ಮುಸ್ಲಿಂ ಕುಟುಂಬವು 100 ಹಿಂದೂ ಕುಟುಂಬಗಳ ನಡುವೆ ಅತ್ಯಂತ ಸುರಕ್ಷಿತವಾಗಿರುತ್ತದೆ. ಅವರಿಗೆ ತಮ್ಮ ಎಲ್ಲ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವ ಸ್ವಾತಂತ್ರ್ಯವಿರುತ್ತದೆ. ಆದರೆ, 50 ಮಂದಿ ಹಿಂದೂಗಳು 100 ಮುಸ್ಲಿಂ ಕುಟುಂಬಗಳ ನಡುವೆ ಸುರಕ್ಷಿತವಾಗಿರಬಲ್ಲರೆ? ಇಲ್ಲ. ಈ ಮಾತಿಗೆ ಬಾಂಗ್ಲಾದೇಶವೇ ಉದಾಹರಣೆ. ಅದಕ್ಕೂ ಮುನ್ನ ಪಾಕಿಸ್ತಾನ ಉದಾಹರಣೆಯಾಗಿತ್ತು. ಅಫ್ಘಾನಿಸ್ತಾನದಲ್ಲಿ ಏನಾಯಿತು? ನಮಗೆ ಹೊಡೆತ ಬೀಳುವುದಕ್ಕೂ ಮುನ್ನ ನಾವು ಜಾಗೃತರಾಗಿರಬೇಕಾಗುತ್ತದೆ” ಎಂದು ಹೇಳಿದ್ದಾರೆ.

2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಯಾವುದೇ ಕೋಮು ಗಲಭೆಗಳಾಗಿಲ್ಲ ಎಂದೂ ಆದಿತ್ಯನಾಥ್ ಹೇಳಿದ್ದಾರೆ.

“ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತವಾಗಿದ್ದಾರೆ. ಹಿಂದೂಗಳು ಸುರಕ್ಷಿತವಾಗಿದ್ದರೆ, ಅವರೂ ಸುರಕ್ಷಿತವಾಗಿರುತ್ತಾರೆ. 2017ಕ್ಕೂ ಮುನ್ನ, ಉತ್ತರ ಪ್ರದೇಶದಲ್ಲಿ ಗಲಭೆಗಳಾದಾಗ ಹಿಂದೂ ಅಂಗಡಿಗಳು ಉರಿಯುತ್ತಿದ್ದರೆ, ಮುಸ್ಲಿಮರ ಅಂಗಡಿಗಳೂ ಉರಿಯುತ್ತಿದ್ದವು. ಹಿಂದೂ ಮನೆಗಳು ಉರಿಯುತ್ತಿದ್ದರೆ, ಮುಸ್ಲಿಮರ ಮನೆಗಳೂ ಉರಿಯುತ್ತಿದ್ದವು. ಆದರೆ, 2017ರ ನಂತರ, ಗಲಭೆಗಳು ಸ್ಥಗಿತಗೊಂಡಿವೆ” ಎಂದೂ ಅವರು ಪ್ರತಿಪಾದಿಸಿದ್ದಾರೆ.

“ನಾನೊಬ್ಬ ಸಾಮಾನ್ಯ ಪ್ರಜೆಯಾಗಿದ್ದು, ಉತ್ತರ ಪ್ರದೇಶದ ಪ್ರಜೆಯಾಗಿದ್ದೇನೆ. ನಾನು ಯೋಗಿಯಾಗಿದ್ದು, ಎಲ್ಲರ ಸಂತೋಷವನ್ನು ಬಯಸುತ್ತೇನೆ. ನಾನು ಎಲ್ಲರ ಬೆಂಬಲ ಮತ್ತು ಅಭಿವೃದ್ಧಿಯಲ್ಲಿ ನಂಬಿಕೆ ಇರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇಡೀ ವಿಶ್ವದಲ್ಲೇ ಸನಾತನ ಧರ್ಮ ಅತ್ಯಂತ ಪುರಾತನ ಧರ್ಮವಾಗಿದ್ದು, ಜಗತ್ತಿನ ಇತಿಹಾಸದಲ್ಲೇ ಹಿಂದೂ ರಾಜರು ಇತರರ ಮೇಲೆ ಅಧಿಕಾರ ಚಲಾಯಿಸಿದ ನಿದರ್ಶನಗಳಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

“ಇಡೀ ವಿಶ್ವದಲ್ಲಿ ಸನಾತನ ಧರ್ಮವು ಅತ್ಯಂತ ಪುರಾತನ ಧರ್ಮ ಮತ್ತು ಸಂಸ್ಕೃತಿಯಾಗಿದೆ. ನೀವು ಅದರ ಹೆಸರಿನಿಂದಲೇ ಅದನ್ನು ಊಹಿಸಬಹುದು. ಸನಾತನ ಧರ್ಮದ ಅನುಯಾಯಿಗಳು ಇತರರನ್ನು ತಮ್ಮ ಧರ್ಮಕ್ಕೆ ಮತಾಂತರಿಸಲಿಲ್ಲ. ಆದರೆ, ಅದಕ್ಕೆ ಬದಲಾಗಿ ಅವರು ಪಡೆದಿದ್ದೇನು? ಈ ವಿನಿಮಯದಲ್ಲಿ ಅವರು ಪಡೆದ ಲಾಭವೇನು? ಹಿಂದೂ ದೊರೆಗಳು ತಮ್ಮ ಪ್ರಾಬಲ್ಯವನ್ನು ಬಳಸಿಕೊಂಡು ಇತರರ ಮೇಲೆ ಅಧಿಕಾರ ಚಲಾಯಿಸಿರುವ ನಿದರ್ಶನ ಇಡೀ ವಿಶ್ವದ ಯಾವ ಭಾಗದಲ್ಲಿಯೂ ಇಲ್ಲ. ಅಂತಹ ನಿದರ್ಶನಗಳು ಇಲ್ಲವೇ ಇಲ್ಲ” ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News