ಬಿಹಾರ ಸಿಎಂ ನಿತೀಶ್ ಅವರ ಮಾನಸಿಕ ಆರೋಗ್ಯದ ಕುರಿತು ವೈದ್ಯಕೀಯ ಪ್ರಕಟಣೆ ಬಿಡುಗಡೆ ಮಾಡಲು ಪ್ರಶಾಂತ್ ಕಿಶೋರ್‌ ಆಗ್ರಹ

Update: 2025-03-25 23:10 IST
ಬಿಹಾರ ಸಿಎಂ ನಿತೀಶ್ ಅವರ ಮಾನಸಿಕ ಆರೋಗ್ಯದ ಕುರಿತು ವೈದ್ಯಕೀಯ ಪ್ರಕಟಣೆ ಬಿಡುಗಡೆ ಮಾಡಲು ಪ್ರಶಾಂತ್ ಕಿಶೋರ್‌ ಆಗ್ರಹ

 ಪ್ರಶಾಂತ್ ಕಿಶೋರ್ , ನಿತೀಶ್ ಕುಮಾರ್ | PC : PTI 

  • whatsapp icon

ಹೊಸ ದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾನಸಿಕ ಸ್ವಾಸ್ಥ್ಯದ ಕುರಿತು ವೈದ್ಯಕೀಯ ಪ್ರಕಟಣೆ ಬಿಡುಗಡೆ ಮಾಡಬೇಕು ಎಂದು ಮಂಗಳವಾರ ಜನ್ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಆಗ್ರಹಿಸಿದ್ದು, ಸಾರ್ವಜನಿಕರಿಂದ ಪ್ರಶ್ನೆಗೀಡಾಗುವುದನ್ನು ತಪ್ಪಿಸಲು ನಿತೀಶ್ ಕುಮಾರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಾಧ್ಯಮ ಸಂವಾದಗಳಿಂದ ದೂರ ಇಡಲಾಗುತ್ತಿದೆ ಎಂದೂ ಆರೋಪಿಸಿದರು.

ಶೇಖ್ ಪುರ ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಈ ಮುನ್ನೆಚ್ಚರಿಕೆಗಳ ಹೊರತಾಗಿಯೂ ತಮ್ಮ ಅಸಹಜ ವರ್ತನೆಗಳಿಂದ ಜನರ ಗಮನ ಸೆಳೆಯುವುದನ್ನು ಜೆಡಿಯು ಮುಖ್ಯಸ್ಥರೂ ಆದ ನಿತೀಶ್ ಕುಮಾರ್ ಮುಂದುವರಿಸಿದ್ದಾರೆ ಎಂದು ಹೇಳಿದರು.

“ಮುಖ್ಯಮಂತ್ರಿಗಳ ಮಾನಸಿಕ ಸ್ವಾಸ್ಥ್ಯದ ಕುರಿತು 2023ರಲ್ಲಿ ಪ್ರಥಮ ಬಾರಿಗೆ ಕಳವಳ ವ್ಯಕ್ತಪಡಿಸಿದ್ದು ಅವರ ಆಪ್ತರಾಗಿದ್ದ ದಿ. ಸುಶೀಲ್ ಮೋದಿ. ಕಳೆದ ಕೆಲವು ವರ್ಷಗಳಿಂದ ನಿತೀಶ್ ಕುಮಾರ್ ಅವರ ವರ್ತನೆಯನ್ನು ಬಿಹಾರದ ಜನತೆ ಗಮನಿಸುತ್ತಿದ್ದಾರೆ” ಎಂದು ನಿತೀಶ್ ಕುಮಾರ್ ರೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಜೆಡಿಯು ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಪ್ರಶಾಂತ್ ಕಿಶೋರ್ ಎಚ್ಚರಿಸಿದರು.

ನಿತೀಶ್ ಕುಮಾರ್ ಅವರ ಸಾರ್ವಜನಿಕ ಭಾಗವಹಿಸುವಿಕೆ ಹಾಗೂ ಪತ್ರಿಕಾ ಸಂವಾದಗಳನ್ನು ಸೀಮಿತಗೊಳಿಸಲಾಗಿದ್ದರೂ, ತಮ್ಮ ಅಸಹಜ ವರ್ತನೆಯಿಂದ ಅವರು ಈಗಲೂ ಜನರ ಗಮನ ಸೆಳೆಯುತ್ತಿದ್ದಾರೆ. ನಿತೀಶ್ ಕುಮಾರ್ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಹೆಸರನ್ನು ಮರೆಯುತ್ತಿದ್ದಾರೆ. ಅವರು ತಮ್ಮ ಪ್ರವಾಸದ ವೇಳೆ ತಾನು ಯಾವ ಜಿಲ್ಲೆಯಲ್ಲಿದ್ದೇನೆ ಎಂಬುದನ್ನೂ ಮರೆಯುತ್ತಿದ್ದಾರೆ. ಬಿಹಾರ ನಾಗರಿಕ ಸೇವಾ ಆಯೋಗದ ಪರೀಕ್ಷೆಯ ವಿರುದ್ಧ ಇತ್ತೀಚೆಗೆ ನಡೆದ ಹೋರಾಟಗಳ ಸಂದರ್ಭದಲ್ಲೂ ಕೂಡಾ ಅವರಿಗೆ ರಾಜ್ಯದಲ್ಲಿ ಏನಾಗುತ್ತಿದೆ ಎಂಬುದು ತಿಳಿದಿರಲಿಲ್ಲ ಎಂದು ನನಗೆ ತಿಳಿದು ಬಂದಿತು” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಒಂದು ವೇಳೆ ವೈದ್ಯಕೀಯ ಪ್ರಕಟನೆಯನ್ನು ಬಿಡುಗಡೆ ಮಾಡಿದರೆ, ನಿತೀಶ್ ಕುಮಾರ್ ರ ಮಾನಸಿಕ ಸ್ವಾಸ್ಥ್ಯದ ಕುರಿತು ಜನರ ಮನಸ್ಸಿನಲ್ಲಿ ಮೂಡಿರುವ ತಪ್ಪು ಗ್ರಹಿಕೆ ಮಾಯವಾಗಲಿದೆ. ಆದರೆ, ಅವರು ಇಂಥದ್ದಕ್ಕೆಲ್ಲ ಒಪ್ಪುವುದಿಲ್ಲ ಎಂಬುದು ನನಗೆ ಖಚಿತವಾಗಿ ತಿಳಿದಿದೆ” ಎಂದೂ ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಿತೀಶ್ ಕುಮಾರ್ ನಾಯಕತ್ವದ ಕುರಿತು ಪ್ರಶಾಂತ್ ಕಿಶೋರ್ ನಿರಂತರವಾಗಿ ಟೀಕಿಸುತ್ತಿದ್ದಾರೆ. ಸರಕಾರದ ಮೇಲೆ ನಿಯಂತ್ರಣ ಸಾಧಿಸಲು ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯನ್ನೂ ಖಂಡಿಸಿದರು. ಸರಕಾರದ ಅವಧಿ ಇನ್ನೇನು ಮುಕ್ತಾಯಗೊಳ್ಳಲಿರುವಾಗ, ಈ ಸಚಿವ ಸಂಪುಟ ವಿಸ್ತರಣೆಯು ಸಾರ್ವಜನಿಕ ಸಂಪನ್ಮೂಲದ ದುರ್ಬಳಕೆಯಾಗಿದೆ ಎಂದೂ ಅವರು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News