ರಾಷ್ಟ್ರ ರಾಜಧಾನಿಗೆ ಒಂದು ಲಕ್ಷ ಕೋಟಿ ರೂ. ಗಳ ಬಜೆಟ್ ಮಂಡಿಸಿದ ದಿಲ್ಲಿ ಸಿಎಂ

Update: 2025-03-26 09:06 IST
ರಾಷ್ಟ್ರ ರಾಜಧಾನಿಗೆ ಒಂದು ಲಕ್ಷ ಕೋಟಿ ರೂ. ಗಳ ಬಜೆಟ್ ಮಂಡಿಸಿದ ದಿಲ್ಲಿ ಸಿಎಂ

PTI

  • whatsapp icon

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಗೆ ಒಂದು ಲಕ್ಷ ಕೋಟಿ ರೂಪಾಯಿಯ ಬಜೆಟನ್ನು ಬಿಜೆಪಿಯ ನೂತನ ಸರ್ಕಾರ ಮಂಗಳವಾರ ಮಂಡಿಸಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು 2025-26ನೇ ಸಾಲಿಗೆ 1 ಲಕ್ಷ ಕೋಟಿ ರೂಪಾಯಿ ಗಾತ್ರದ ಮಹತ್ವಾಕಾಂಕ್ಷಿ ಬಜೆಟ್ ಮಂಡಿಸಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಶೇಕಡ 31.6ರಷ್ಟು ಅಧಿಕ. ಕಳೆದ ವರ್ಷ ಆಮ್ ಆದ್ಮಿ ಪಾರ್ಟಿ ಸರ್ಕಾರ 76 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ಡಬಲ್ ಇಂಜಿನ್ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಚುನಾವಣಾ ಪೂರ್ವದಲ್ಲಿ ಹೇಳುತ್ತಿದ್ದ ಬಿಜೆಪಿ, ಅನುದಾನ ಹಾಗೂ ಸಾಲದ ರೂಪದಲ್ಲಿ ಕೇಂದ್ರದಿಂದ ನೆರವು ಸಿಗಲಿದೆ ಎಂದು ಭರವಸೆ ನೀಡಿತ್ತು. ಬಂಡವಾಳ ವೆಚ್ಚ ಮತ್ತು ವಿವಿಧ ಯೋಜನೆಗಳಿಗೆ ಅನುದಾನವನ್ನು ದ್ವಿಗುಣಗೊಳಿಸಲಾಗುವುದು ಎಂದು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು.

ಆ್ಯಪ್ ಸರ್ಕಾರದಂತೆ ರೇಖಾ ಗುಪ್ತಾ ಸರ್ಕಾರ ಕೂಡಾ ಶಿಕ್ಷಣ ಕ್ಷೇತ್ರಕ್ಕೆ ಸಿಂಹಪಾಲ ನೀಡಿದೆ. ಈ ವಲಯಕ್ಕೆ 19,291 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಹಿಂದಿನ ವರ್ಷದ ಬಜೆಟ್ಗೆ ಹೋಲಿಸಿದರೆ ಶೇಕಡ 19.3ರಷ್ಟು ಅಧಿಕ. ರಸ್ತೆ ಮತ್ತು ಸೇತುವೆ ಸೇರಿದಂತೆ ಸಾರಿಗೆ ವಲಯಕ್ಕೆ 12,952 ಕೋಟಿ (2024-25ರಲ್ಲಿ 7470 ಕೋಟಿ) ಮತ್ತು ಆರೋಗ್ಯ ವಲಯಕ್ಕೆ 12,893 ಕೋಟಿ (ಹಿಂದಿನ ವರ್ಷ 8686 ಕೋಟಿ) ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ನಗರದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಬಡಮಹಿಳೆಯರಿಗೆ ಮಾಸಿಕ 2500 ರೂಪಾಯಿ ನೀಡುವ ಮಹಿಳಾ ಸಮೃದ್ಧಿ ಯೋಜನೆಗೆ 5100 ಕೋಟಿ ರೂಪಾಯಿ ಮೀಸಲಿರಿಸಿರುವುದಾಗಿ ಗುಪ್ತಾ ಘೋಷಿಸಿದರು. ಆಯುಷ್ಮಾನ್ ಭಾರತ್ ಪಿಂಚಣಿ ಯೋಜನೆ ಜಾರಿ, ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ, ವಿಧವಾ ಮತ್ತು ನಿರ್ಗತಿಕ ಮಹಿಳೆಯರ ಪಿಂಚಣಿ ಹೆಚ್ಚಳ, ಯಮುನಾ ನದಿ ಮಾಲಿನ್ಯ ತಡೆಯಲು ವಿಕೇಂದ್ರೀಕೃತ ಒಳಚರಂಡಿ ಸಂಸ್ಕರಣಾ ಘಟಕಗಳ ಸ್ಥಾಪನೆ ಇತರ ಪ್ರಮುಖ ಬಜೆಟ್ ನಿರ್ಧಾರಗಳಾಗಿವೆ.

ನೀರು ಮತ್ತು ನೈರ್ಮಲ್ಯಕ್ಕೆ 9000 ಕೋಟಿ ನಿಗದಿಪಡಿಸಿರುವ ಗುಪ್ತಾ, ಶುದ್ಧ ನೀರು ಪೂರೈಸುವುದು ಸರ್ಕಾರದ ಆದ್ಯ ಹೊಣೆಗಾರಿಕೆ ಎಂದು ವಿವರಿಸಿದರು. 1290 ಎಂಜಿಡಿ ನೀರಿನ ಬೇಡಿಕೆ ಇದ್ದು, ಸದ್ಯದ ಸಾಮಥ್ರ್ಯ 1000 ಎಂಜಿಡಿ ಮಾತ್ರ ಇದೆ. ಈ ಅಂತರ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News