ಪೊಲೀಸ್ ಠಾಣೆಯಲ್ಲೇ ಗಂಡನ ಮೇಲೆ ಹಲ್ಲೆ ನಡೆಸಿದ ಬಾಕ್ಸರ್ ಸ್ವೀಟಿ ಬೂರಾ‌

Update: 2025-03-25 22:45 IST
Saweety Boora and Deepak Hooda

ದೀಪಕ್ ನಿವಾಸ್ , ಸ್ವೀಟಿ ಬೂರ | PC : X

  • whatsapp icon

ಚಂಡೀಗಢ: ವಿವಾಹ ವಿಚ್ಛೇದನ ಕಲಾಪ ನಡೆಯುತ್ತಿದ್ದಾಗ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರ ಎಲ್ಲರ ಎದುರಲ್ಲೇ ತನ್ನ ಗಂಡನ ಮೇಲೆ ಹಲ್ಲೆ ನಡೆಸಿರುವುದು ಕ್ಯಾಮರದಲ್ಲಿ ದಾಖಲಾಗಿದೆ. ಘಟನೆಯು ಹರ್ಯಾಣದ ಹಿಸಾರ್‌ನ ಪೊಲೀಸ್ ಠಾಣೆಯೊಂದರಲ್ಲಿ ಮಾರ್ಚ್ 15ರಂದು ನಡೆದಿದೆ ಎನ್ನಲಾಗಿದೆ. 

ಗಂಡ, ಕಬಡ್ಡಿ ಆಟಗಾರ ದೀಪಕ್ ನಿವಾಸ್ ಹೂಡ ವರದಕ್ಷಿಣೆ ತರುವಂತೆ ಒತ್ತಾಯಿಸಿ ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಬೂರಾ, ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದ್ದಾಗ, ಬೂರಾ ಒಮ್ಮೆಲೇ ಎದ್ದು ಹೂಡಾರತ್ತ ಧಾವಿಸಿ ಅವರ ಕತ್ತು ಹಿಡಿಯುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತೋರಿಸುತ್ತದೆ. ಆಗ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಬೂರಾರನ್ನು ಹಿಂದಕ್ಕೆ ಎಳೆದು ತಂದರು. ಆದರೆ, ಗಂಡನನ್ನು ಆಕ್ರೋಶದಿಂದ ಬೈಯುವುದನ್ನು ಅವರು ಮುಂದುವರಿಸಿದರು. ಇತರರು ಹಿಡಿದಿಟ್ಟರೂ ಅವರು ಮತ್ತೆ ಮತ್ತೆ ಗಂಡನಿಗೆ ಹೊಡೆಯಲು ಧಾವಿಸುತ್ತಿರುವುದು ಕಂಡುಬಂತು.

ಏಶ್ಯಾಡ್ ಕಂಚು ವಿಜೇತ ಕಬಡ್ಡಿ ಆಟಗಾರ ದೀಪಕ್ ಹೂಡ ವಿರುದ್ಧ ಬೂರಾ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು. ಹೂಡ ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆ ತರುವಂತೆ ಬಲವಂತಪಡಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.

ಅವರ ಮದುವೆ 2022ರಲ್ಲಿ ನಡೆದಿತ್ತು.

‘‘ತನ್ನ ಗಂಡ ದೀಪಕ್ ಹೂಡ ವಿರುದ್ಧ ಬೂರಾ ನೀಡಿರುವ ದೂರಿನ ಆಧಾರದಲ್ಲಿ ಫೆಬ್ರವರಿ 25ರಂದು ಎಪ್‌ಐಆರ್ ದಾಖಲಾಗಿದೆ’’ ಎಂದು ಹಿಸಾರ್ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೀಮಾ ತಿಳಿಸಿದರು.

ದೂರಿಗೆ ಸಂಬಂಧಿಸಿ ಹೂಡರಿಗೆ 2-3 ಬಾರಿ ನೋಟಿಸ್‌ಗಳನ್ನು ನೀಡಲಾಗಿದೆ, ಆದರೆ ಅವರು ಠಾಣೆಗೆ ಹಾಜರಾಗಿಲ್ಲ ಎಂದು ಠಾಣಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

‘‘ಈ ಆಘಾತದಿಂದಾಗಿ ನನ್ನ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವಾಗಿಲ್ಲ. ನಾನು ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿ ನಂತರದ ದಿನಾಂಕವೊಂದನ್ನು ನೀಡುವಂತೆ ಕೋರಿದ್ದೇನೆ. ನಾನು ಖಂಡಿವಾಗಿಯೂ ಪೊಲೀಸ್ ಠಾಣೆಗೆ ಹೋಗುತ್ತೇನೆ. ಆದರೆ, ನನ್ನ ಹೆಂಡತಿಯ ವಿರುದ್ಧ ನಕಾರಾತ್ಮಕ ಮಾತುಗಳನ್ನು ಆಡುವುದಿಲ್ಲ. ಅವರನ್ನು ಭೇಟಿಯಾಗಲು ನನಗೆ ಅವಕಾಶ ನೀಡಲಾಗಿಲ್ಲ’’ ಎಂದು ಅವರು ಪಿಟಿಐಯೊಂದಿಗೆ ಮಾತನಾಡುತ್ತಾ ಹೇಳಿದರು.

ಹೂಡ 2024ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಮೇಹಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News