ದೊಡ್ಡ ಸಂಖ್ಯೆಯಲ್ಲಿ ಮರಕಡಿಯುವುದು ನರಹತ್ಯೆಗಿಂತಲೂ ಭೀಕರ: ಸುಪ್ರೀಂಕೋರ್ಟ್

Update: 2025-03-26 08:04 IST
ದೊಡ್ಡ ಸಂಖ್ಯೆಯಲ್ಲಿ ಮರಕಡಿಯುವುದು ನರಹತ್ಯೆಗಿಂತಲೂ ಭೀಕರ: ಸುಪ್ರೀಂಕೋರ್ಟ್
  • whatsapp icon

ಹೊಸದಿಲ್ಲಿ: ದೊಡ್ಡ ಸಂಖ್ಯೆಯಲ್ಲಿ ಮರಕಡಿಯುವುದು ನರಹತ್ಯೆಗಿಂತಲೂ ಭೀಕರ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಯಾವುದೇ ದಯೆ ತೋರಿಸಬಾರದು ಎಂದು ಖಂಡತುಂಡವಾಗಿ ಹೇಳಿರುವ ಕೋರ್ಟ್, ಅಕ್ರಮವಾಗಿ ಕಡಿದ ಪ್ರತಿ ಮರಕ್ಕೆ ಒಂದು ಲಕ್ಷ ರೂಪಾಯಿಗಳಂತೆ ದಂಡ ವಿಧಿಸಿದೆ.

ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೇ ಅಕ್ರಮವಾಗಿ ಮರ ಕಡಿಯುವ ದಂಧೆಗೆ ಸ್ಪಷ್ಟ ಸಂದೇಶವನ್ನು ಸುಪ್ರೀಂಕೋರ್ಟ್ನ ಈ ತೀರ್ಪು ರವಾನಿಸಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಉಜ್ಜಲ್ ಭೂಯಾನ್ ಅವರನ್ನು ಒಳಗೊಂಡ ನ್ಯಾಯಪೀಠ, ತಾಜ್ ಟ್ರಪೇಝಿಯಂ ವಲಯದಲ್ಲಿ 454 ಮರಗಳನ್ನು ಅಕ್ರಮವಾಗಿ ಕಡಿದ ವ್ಯಕ್ತಿಯ ಮೇಲ್ಮನವಿಯನ್ನು ತಿರಸ್ಕರಿಸಿದೆ.

ಪರಿಸರ ವಿಚಾರದಲ್ಲಿ ಕೋರ್ಟ್ಗೆ ಸಹಕರಿಸಿದ ಅಮಿಕಸ್ ಕ್ಯೂರಿ, ಹಿರಿಯ ವಕೀಲ ಎಡಿಎನ್ ರಾವ್ ಅವರು ಈ ಸಂಬಂಧ ನೀಡಿ ಸಲಹೆಗಳನ್ನು ನ್ಯಾಯಪೀಠ ಸ್ವೀಕರಿಸಿದೆ. ಕಾನೂನು ಮತ್ತು ಮರಗಳನ್ನು ಹಗುರವಾಗಿ ಪರಿಗಣಿಸಬಾರದು ಎನ್ನುವ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ರಾವ್ ಸಲಹೆ ನೀಡಿದ್ದರು. ಇಂತಹ ಪ್ರಕರಣಗಳಲ್ಲಿ ಎಷ್ಟು ದಂಡ ವಿಧಿಸಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್ ಈ ತೀರ್ಪಿನ ಮೂಲಕ ಮಾನದಂಡ ನಿಗದಿಪಡಿಸಿದಂತಾಗಿದೆ.

"ಪರಿಸರ ಪ್ರಕರಣಲ್ಲಿ ಯಾವುದೇ ದಯೆ ತೋರಿಸಬಾರದು. ದೊಡ್ಡ ಸಂಖ್ಯೆಯ ಮರಗಳನ್ನು ಕಡಿಯುವುದು ನರಹತ್ಯೆಗಿಂತ ಕೆಟ್ಟದು. ಇಂಥ ಮರವನ್ನು ಮತ್ತೆ ಬೆಳೆಸಲು ಅಥಾ 454 ಮರಗಳ ಹಸಿರು ಹೊದಿಕೆಯನ್ನು ಮರು ಸೃಷ್ಟಿಸಲು ಕನಿಷ್ಠ 100 ವರ್ಷ ಬೇಕು. 2015ರಲ್ಲಿ ನ್ಯಾಯಾಲಯ ನಿಷೇಧ ವಿಧಿಸಿದ್ದರೂ, ಕೋರ್ಟ್ನ ಅನುಮತಿ ಇಲ್ಲದೇ ಇವುಗಳನ್ನು ಕಡಿಯಲಾಗಿದೆ" ಎಂದು ನ್ಯಾಯಪೀಠ ಆಕ್ಷೇಪಿಸಿದೆ.

ಕೇಂದ್ರದ ಸಶಕ್ತ ಸಮಿತಿಯ ಶಿಫಾರಸ್ಸಿನಂತೆ ಶಿವಶಂಕರ್ ಅಗರ್ವಾಲ್ ಎಂಬ ಆರೋಪಿಗೆ ಪ್ರತಿ ಮರಕ್ಕೆ ಒಂದು ಲಕ್ಷ ರೂಪಾಯಿಗಳಂತೆ ದಂಡ ವಿಧಿಸಲಾಗಿದೆ. "ನನ್ನ ಕಕ್ಷಿದಾರ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ ಹಾಗೂ ದಂಡವನ್ನು ಕಡಿಮೆ ಮಾಡುವಂತೆ ಕೋರಿದ್ದಾರೆ" ಎಂದು ಅರ್ಜಿದಾರರ ಪರ ವಕೀಲ ಮುಕುಲ್ ರೋಹಟ್ಗಿ ಹೇಳಿದರು. ಆದರೆ ಇದಕ್ಕೆ ಕೋರ್ಟ್ ನಿರಾಕರಿಸಿದ್ದು, ಅಕ್ಕಪಕ್ಕದ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಲು ಅವಕಾಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News