‘ದ್ರೋಹಿ’ಯನ್ನು ಅವಮಾನಿಸಿದ್ದಕ್ಕೆ ಕಾಮ್ರಾಗೆ ನೋಟಿಸ್ ನೀಡಿದ ಮಹಾರಾಷ್ಟ್ರ ಸರಕಾರ ಸೋಲಾಪುರಕರ್ ಬಗ್ಗೆ ಮೌನವಾಗಿದೆ: ಉದ್ಧವ ಠಾಕ್ರೆ

ಉದ್ಧವ ಠಾಕ್ರೆ | PTI
ಮುಂಬೈ: ದ್ರೋಹಿ’ಯನ್ನು ಅವಮಾನಿಸಿದ್ದಕ್ಕೆ ಮಹಾರಾಷ್ಟ್ರ ಸರಕಾರವು ಕಾಮಿಡಿಯನ್ ಕುನಾಲ್ ಕಾಮ್ರಾಗೆ ನೋಟಿಸ್ ಹೊರಡಿಸಿದೆ, ಆದರೆ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ ನಟ ರಾಹುಲ್ ಸೋಲಾಪುರಕರ್ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ ಠಾಕ್ರೆಯವರು ಗುರುವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಅವರು, ಈದ್ಗಾಗಿ ಮುಸ್ಲಿಮರಿಗೆ ವಿಶೇಷ ಕಿಟ್ಗಳ ವಿತರಣೆಗೆ ‘ಸೌಗತ್-ಎ-ಮೋದಿ’ ಉಪಕ್ರಮಕ್ಕಾಗಿ ಬಿಜೆಪಿ ವಿರುದ್ಧವೂ ದಾಳಿಯನ್ನು ನಡೆಸಿದರು. ಅದನ್ನು ‘ಸೌಗತ್-ಎ-ಸತ್ತಾ(ಅಧಿಕಾರದ ಉಡುಗೊರೆ)’ ಎಂದು ಬಣ್ಣಿಸಿದ ಅವರು, ಕೇಸರಿ ಪಕ್ಷವು ಬೂಟಾಟಿಕೆಯನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
‘ದ್ರೋಹಿ’ಯ(ಏಕನಾಥ ಶಿಂದೆಯವರನ್ನು ಉಲ್ಲೇಖಿಸಿ) ವಿರುದ್ಧ ಹೇಳಿಕೆ ನೀಡಿದಾಗ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾಗಿದ್ದ ಸ್ಟುಡಿಯೋಕ್ಕೆ ನುಗ್ಗಲಾಗಿತ್ತು ಮತ್ತು ಕಾಮ್ರಾಗೆ ಎರಡು ಸಮನ್ಸ್ (ಶಿಂದೆಯವರನ್ನು ಅವಮಾನಿಸಿದ ಆರೋಪದಲ್ಲಿ) ಕಳುಹಿಸಲಾಗಿತ್ತು. ಆದರೆ ಶಿವಾಜಿ ಮಹಾರಾಜರನ್ನು ಅವಮಾನಿಸಿದ ಆರೋಪವನ್ನು ಹೊತ್ತಿರುವ ಸೋಲಾಪುರಕರ್ಗೆ ಒಂದಾದರೂ ಸಮನ್ಸ್ ಹೊರಡಿಸಲಾಗಿದೆಯೇ? ಕಾಮ್ರಾ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲು ನಿಮಗೆ ಯಾವ ಹಕ್ಕು ಇದೆ? ಯಾರ ವರ್ಚಸ್ಸನ್ನು ರಕ್ಷಿಸಲು ನೀವು ಪ್ರಯತ್ನಿಸುತ್ತಿದ್ದೀರಿ ಎಂದು ಠಾಕ್ರೆ ಪ್ರಶ್ನಿಸಿದರು.
ಕಾಮ್ರಾ ತನ್ನ ಕಾರ್ಯಕ್ರಮದಲ್ಲಿ ನೇರವಾಗಿ ಹೆಸರಿಸಿರದಿದ್ದ ವ್ಯಕ್ತಿ (ಶಿಂದೆ)ಯನ್ನು ರಕ್ಷಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಯತ್ನಿಸುತ್ತಿದ್ದಾರೆ, ಆದರೆ ‘ಕಾಮ್ರಾ ಹೆಸರಿಸಿದ್ದ ವ್ಯಕ್ತಿ’ಯ ಬಗ್ಗೆ ಏನನ್ನೂ ಹೇಳಲಿಲ್ಲ ಎಂದೂ ಠಾಕ್ರೆ ಹೇಳಿದರು.
ಗಮನಾರ್ಹವಾಗಿ ಶಿವಸೇನೆ(ಯುಬಿಟಿ)ಯ ಮುಖವಾಣಿ ‘ಸಾಮನಾ’ ಈ ವಾರದ ಆರಂಭದಲ್ಲಿ, ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಮ್ರಾ ನೇರ ಟೀಕೆಗಳ ಕುರಿತು ಬಿಜೆಪಿ ಮೌನವಾಗಿದೆ ಎಂದು ಬೆಟ್ಟು ಮಾಡಿತ್ತು.