‘ಡಮ್ಮಿ ಶಾಲೆ’ಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಬರೆಯಲು ಅವಕಾಶವಿಲ್ಲ: ಸಿಬಿಎಸ್ಇ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ಸಿಬಿಎಸ್ಇ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಅವರಿಗೆ ತೇರ್ಗಡೆ ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳನ್ನು ನೀಡುವ ‘ಡಮ್ಮಿ ಶಾಲೆ’ಗಳಲ್ಲಿ ಪ್ರವೇಶ ಪಡೆದಿರುವವರಿಗೆ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಶಾಲೆಗಳಲ್ಲಿ ಪ್ರವೇಶ ಪಡೆಯುವುದರ ಹೊಣೆಗಾರಿಕೆ ವಿದ್ಯಾರ್ಥಿಗಳು ಮತ್ತು ಪೋಷಕರದ್ದೇ ಆಗಿರುತ್ತದೆ ಎಂದೂ ಅವರು ಹೇಳಿದ್ದಾರೆ.
‘ಡಮ್ಮಿ ಶಾಲೆ’ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯು,ಈ ಶಾಲೆಗಳ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವುದನ್ನು ನಿಷೇಧಿಸಲು ಮತ್ತು ಅವರು ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ(ಎನ್ಐಒಎಸ್)ಯ ಪರೀಕ್ಷೆಯನ್ನು ಬರೆಯುವಂತಾಗಲು ಪರೀಕ್ಷಾ ಉಪನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಚಿಂತನೆ ನಡೆಸುತ್ತಿದೆ.
ಅಭ್ಯರ್ಥಿಗಳು ಮಂಡಳಿಯ ದಿಢೀರ್ ತಪಾಸಣೆಗಳ ಸಂದರ್ಭ ತರಗತಿಗೆ ಗೈರುಹಾಜರಾಗಿರುವುದು ಕಂಡು ಬಂದರೆ ಅವರಿಗೆ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. ನಿಯಮಿತ ಶಾಲೆಗೆ ಹಾಜರಾಗದ ಹೊಣೆಗಾರಿಕೆ ವಿದ್ಯಾರ್ಥಿಗಳ ಮತ್ತು ಅವರ ಪೋಷಕರದ್ದೇ ಆಗಿರುತ್ತದೆ ಎಂದು ಹಿರಿಯ ಸಿಬಿಎಸ್ಇ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮಂಡಳಿಯ ಸಂಯೋಜನೆ ಮತ್ತು ಪರೀಕ್ಷಾ ಉಪನಿಯಮಗಳಿಗೆ ಅನುಗುಣವಾಗಿ ಇಂತಹ ಶಾಲೆಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.
ಮಂಡಳಿಯ ನಿರ್ಧಾರವು 2025-26ನೇ ಶೈಕ್ಷಣಿಕ ವರ್ಷದಿಂದ ಜಾರಿಗೊಳ್ಳಲಿದೆ.
ಮಂಡಳಿಯ ನಿಯಮಗಳ ಪ್ರಕಾರ ಬೋರ್ಡ್ ಪರೀಕ್ಷೆಗಳಿಗೆ ಬರೆಯಲು ಅಭ್ಯರ್ಥಿಗಳು ಕನಿಷ್ಠ ಶೇ.75ರಷ್ಟು ಹಾಜರಾತಿಯನ್ನು ಹೊಂದಿರುವುದು ಅಗತ್ಯವಾಗಿದೆ. ಅಗತ್ಯ ಹಾಜರಾತಿಯಿಲ್ಲದಿದ್ದರೆ ಕೇವಲ ಡಮ್ಮಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಅಂತಹ ವಿದ್ಯಾರ್ಥಿಗಳನ್ನು ಸಿಬಿಎಸ್ಇ ಪರೀಕ್ಷೆಗಳನ್ನು ಬರೆಯಲು ಅನರ್ಹವಾಗಿಸಬಹುದು ಎಂದು ಅಧಿಕಾರಿ ತಿಳಿಸಿದರು.
ಸಿಬಿಎಸ್ಇ ಅನುಮತಿಸದಿದ್ದರೆ ಅಂತಹ ವಿದ್ಯಾರ್ಥಿಗಳು ಎನ್ಐಒಎಸ್ ಪರೀಕ್ಷೆಗೆ ಹಾಜರಾಗಬಹುದು. ವೈದ್ಯಕೀಯ ತುರ್ತು ಸ್ಥಿತಿಗಳು,ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಇತರ ಗಂಭೀರ ಕಾರಣಗಳಿದ್ದರೆ ಮಾತ್ರ ಮಂಡಳಿಯು ಅಗತ್ಯ ಹಾಜರಾತಿಯಲ್ಲಿ ಶೇ.25ರಷ್ಟು ವಿನಾಯಿತಿಯನ್ನು ನೀಡುತ್ತದೆ ಎಂದರು.
ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಬಯಸುವ ಹಲವಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಳ ಮೇಲೆ ಮಾತ್ರವೇ ತಮ್ಮ ಗಮನವನ್ನು ಕೇಂದ್ರೀಕರಿಸಲು ಡಮ್ಮಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಅವರು ತರಗತಿಗಳಿಗೆ ಹಾಜರಾಗುವುದಿಲ್ಲ ಮತ್ತು ನೇರವಾಗಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಾರೆ.