2020ರಿಂದ ಭಾರತೀಯ ವಲಸಿಗರ ಮರುವಾಪಸಾತಿಗಾಗಿ ಐಎಎಫ್ ಅಥವಾ ಬಾಡಿಗೆ ವಿಮಾನವನ್ನು ಬಳಸಿಲ್ಲ: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2020ರಿಂದ ಯಾವುದೇ ದೇಶದಿಂದ ಭಾರತೀಯ ವಲಸಿಗರ ಮರುವಾಪಸಾತಿಗಾಗಿ ಯಾವುದೇ ಐಎಎಫ್, ಚಾರ್ಟರ್ಡ್ ಅಥವಾ ವಾಣಿಜ್ಯ ನಾಗರಿಕ ವಿಮಾನವನ್ನು ಬಾಡಿಗೆಗೆ ಪಡೆದಿಲ್ಲ ಎಂದು ಕೇಂದ್ರ ಸರಕಾರವು ಗುರುವಾರ ಸಂಸತ್ತಿನಲ್ಲಿ ತಿಳಿಸಿದೆ.
ರಾಜ್ಯಸಭೆಯಲ್ಲಿ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ಪಬಿತ್ರ ಮಾರ್ಗೆರಿಟಾ ಅವರು ಟಿಎಂಸಿ ಸಂಸದ ಸಾಕೇತ ಗೋಖಲೆಯವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದರು.
2020ರಿಂದ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲು ಮಿಲಿಟರಿ ವಿಮಾನ ಬಳಸಿದ ದೇಶಗಳ ವಿವರಗಳನ್ನೂ ಗೋಖಲೆ ಕೋರಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2020ರಿಂದ ಯಾವುದೇ ದೇಶದಿಂದ ಗಡಿಪಾರು ಮಾಡಲಾದ ಭಾರತೀಯ ವಲಸಿಗರನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಯಾವುದೇ ಐಎಎಫ್, ಚಾರ್ಟರ್ಡ್ ಅಥವಾ ವಾಣಿಜ್ಯ ನಾಗರಿಕ ವಿಮಾನವನ್ನು ಬಾಡಿಗೆಗೆ ಪಡೆದಿಲ್ಲ. ಆದರೆ ಕೆಲವು ಅಸಾಧಾರಣ ಸಂದರ್ಭಗಳಲ್ಲಿ ಗಡಿಪಾರು ಎದುರಿಸುತ್ತಿದ್ದ ಭಾರತೀಯ ವಲಸಿಗರಿಗೆ ವಾಣಿಜ್ಯ ವಿಮಾನಗಳಲ್ಲಿ ಟಿಕೆಟ್ಗಳ ಖರೀದಿಯ ಮೂಲಕ ನೆರವು ನೀಡಲಾಗಿತ್ತು ಎಂದು ಮಾರ್ಗೆರಿಟಾ ತಿಳಿಸಿದರು.
ಇತ್ತೀಚಿಗೆ ಅಮೆರಿಕವು ಅಕ್ರಮ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲು ಮಿಲಿಟರಿ ವಿಮಾನವನ್ನು ಬಳಸಿತ್ತು. 2009ರಿಂದ ಅಮೆರಿಕ ಸರಕಾರವು ಇಂತಹ 15, 564 ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಲು ಚಾರ್ಟರ್ಡ್ ಅಥವಾ ವಾಣಿಜ್ಯ ವಿಮಾನಗಳನ್ನು ಬಳಸಿತ್ತು ಎಂದು ಸಚಿವರು ತಿಳಿಸಿದರು.