ಬುಡಕಟ್ಟು ಜನರ ಜೀವನಮಟ್ಟದಲ್ಲಿ ಸುಧಾರಣೆಯಾಗಿದ್ದರೂ ಅಂತರ ಇನ್ನೂ ಉಳಿದಿದೆ: ಲೋಕಸಭೆಯಲ್ಲಿ ಒಪ್ಪಿಕೊಂಡ ಕೇಂದ್ರ ಸರಕಾರ

Update: 2025-03-27 20:43 IST
ಬುಡಕಟ್ಟು ಜನರ ಜೀವನಮಟ್ಟದಲ್ಲಿ ಸುಧಾರಣೆಯಾಗಿದ್ದರೂ ಅಂತರ ಇನ್ನೂ ಉಳಿದಿದೆ: ಲೋಕಸಭೆಯಲ್ಲಿ ಒಪ್ಪಿಕೊಂಡ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : NDTV 

  • whatsapp icon

ಹೊಸದಿಲ್ಲಿ: ಭಾರತದಲ್ಲಿ ಬುಡಕಟ್ಟು ಜನರ ಜೀವನಮಟ್ಟದಲ್ಲಿ ಸುಧಾರಣೆಯಾಗಿದ್ದು, ಅವರ ಒಟ್ಟು ಶಾಲಾ ದಾಖಲಾತಿ ಅನುಪಾತ, ಆರೋಗ್ಯ ಸೂಚಕಗಳು ಹಾಗೂ ತಲಾವಾರು ಖರೀದಿ ವೆಚ್ಚ ಇವೆಲ್ಲವೂ ಮೇಲ್ಮುಖ ಪ್ರವೃತ್ತಿಯನ್ನು ಪ್ರದರ್ಶಿಸಿದೆಯೆಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವ ದುರ್ಗಾದಾಸ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಬುಡಕಟ್ಟು ಜನಸಮುದಾಯದ ಶಾಲಾ ದಾಖಲಾತಿ ದರ, ಆರೋಗ್ಯಮಟ್ಟ ಹಾಗೂ ತಲಾವಾರು ಆದಾಯದಂತಹ ಮಾನವ ಅಭಿವೃದ್ಧಿಯ ಸೂಚಕಗಳಲ್ಲಿ ಅಂತರಗಳಿರುವುದನ್ನು ಒಪ್ಪಿಕೊಂಡರು. ಆದಾಗ್ಯೂ, ಹಲವಾರು ವರ್ಷಗಳಿಂದೀಚೆಗೆ ಬುಡಕಟ್ಟು ಪಂಗಡಗಳ ಸ್ಥಿತಿಗತಿಗಳಲ್ಲಿ ತುಲನಾತ್ಮಕವಾಗಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದವರು ಹೇಳಿದರು.

ಎಸ್ಸಿ, ಎಸ್ಟಿ ಮತ್ತಿತರ ಸಾಮಾಜಿಕ ಗುಂಪುಗಳಲ್ಲಿ ಮಾನವ ಅಭಿವೃದ್ಧಿ ಸೂಚಕ (ಎಚ್ಡಿಐ)ಗಳಲ್ಲಿನ ಈ ರೀತಿಯ ಇಳಿಕೆಯು ಯಾವತ್ತೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ನೀತಿಯ ಆದ್ಯತೆಯಾಗಿದೆ ಹಾಗೂ ಕೇಂದ್ರ ಸರಕಾರವು ಅದಕ್ಕೆ ಬದ್ಧವಾಗಿದೆ ಎಂದವರು ಹೇಳಿದರು. ಒಟ್ಟು ದಾಖಲಾತಿ ಅನುಪಾತವು ಸಮಗ್ರವಾಗಿ ಹೆಚ್ಚಳವನ್ನು ಕಂಡಿದೆ. ಆರೋಗ್ಯ ಸೂಚಕಗಳು ಸಕಾರಾತ್ಮಕ ಪ್ರವೃತ್ತಿಯನ್ನು ಪ್ರದರ್ಶಿಸುತ್ತವೆ. ಬುಡಕಟ್ಟು ಜನರ ಜೀವನ ಮಟ್ಟದಲಿ ಸುಧಾರಣೆಯಾಗಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು

ಪ್ರೌಢಶಾಲಾ ಮಟ್ಟದಲ್ಲಿ (9-10) ಬುಡಕಟ್ಟು ಜನರ ಒಟ್ಟಾರೆ ದಾಖಲಾತಿ ಅನುಪಾತವು 2012-13ರಲ್ಲಿ ಶೇ.64.94 ಶೇಕಡದಷ್ಟಿದ್ದುದು 2021-22ರಲ್ಲಿ 78.1 ಶೇಕಡಕ್ಕೆ ಹೆಚ್ಚಿದೆ. 2023-24ರಲ್ಲಿ ಅದು ಶೇ.76.9ಕ್ಕೆ ಇಳಿದಿದೆ.

ಬುಡಕಟ್ಟು ಜನರಲ್ಲಿ ಶಿಶು ಮರಣ ದರವು ಪ್ರತಿ 1 ಲಕ್ಷ ಜನನಗಳಿಗೆ ಶೇ.62.1ರಷ್ಟಿದ್ದುದು 2019-20ರಲ್ಲಿ 41.6ಕ್ಕೆ ಇಳಿಯಿತು. ಎಲ್ಲಾ ಸಮುದಾಯಗಳಲ್ಲಿ ಶಿಶು ಮರಣ ದರವು ಈ ಅವಧಿಯಲ್ಲಿ 57ರಿಂದ 35.2ಕ್ಕೆ ಇಳಿದಿತ್ತು.

ಐದು ವರ್ಷಕ್ಕಿಂತ ಕೆಳವಯಸ್ಸಿನ ಬುಡಕಟ್ಟು ಮಕ್ಕಳಲ್ಲಿ ಕುಬ್ಜತೆಯ ಸಮಸ್ಯೆಯು ಶೇ.53.9ರಿಂದ ಶೇ.40.9ಕ್ಕೆ ಇಳಿದಿದೆ. ಎಲ್ಲಾ ಸಮುದಾಯಗಳಲ್ಲಿ ಕುಬ್ಜತೆಯ ಸಮಸ್ಯೆಯು ಶೇ.48ರಿಂದ ಶೇ.35ಕ್ಕೆ ಇಳಿಕೆಯಾಗಿದೆ.

ಬುಡಕಟ್ಟು ಪಂಗಡಗಳ ಮಾಸಿಕ ಖರೀದಿ ವೆಚ್ಚದಲ್ಲಿ ಹೆಚ್ಚಳವಾಗಿದೆ. 2011-12ರಲ್ಲಿ ಅದು ಗ್ರಾಮಾಂತರ ಪ್ರದೇಶಗಳಲ್ಲಿ 1,122 ರೂ. ಹಾಗೂ ನಗರಪ್ರದೇಶಗಲ್ಲಿ 2,193 ರೂ. ಆಗಿದ್ದರೆ, 2023-24ರಲ್ಲಿ ಕ್ರಮವಾಗಿ 3,363 ಹಾಗೂ 2023-24ರಲ್ಲಿ 6 ಸಾವಿರ ರೂ. ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News