ಪರಸ್ಪರರ ಸಂವೇದನೆಗಳನ್ನು ಆಧರಿಸಿ ಭಾರತ-ಬಾಂಗ್ಲಾ ಬಾಂಧವ್ಯ ವೃದ್ಧಿಯಾಗಬೇಕಿದೆ: ಮುಹಮ್ಮದ್ ಯೂನಸ್ ಗೆ ಪ್ರಧಾನಿ ಮೋದಿ ಪತ್ರ

ಪ್ರಧಾನಿ ಮೋದಿ , ಮುಹಮ್ಮದ್ ಯೂನಸ್ | NDTV
ಢಾಕಾ : ಹಸೀನಾ ಸರಕಾರದ ಪತನದ ಬಳಿಕ ಬಿರುಕುಬಿಟ್ಟಿರುವ ಭಾರತ-ಬಾಂಗ್ಲಾ ಸಂಬಂಧವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬಾಂಗ್ಲಾಗೆ ನೀಡಿದ ಸಂದೇಶವೊಂದರಲ್ಲಿ, ಢಾಕಾದ ಜೊತೆಗಿನ ಭಾರತದ ಪಾಲುದಾರಿಕೆಯು ಪರಸ್ಪರರ ಹಿತಾಸಕ್ತಿಗಳ ಸಂವೇದನಾಶೀಲತೆೆಯನ್ನು ಆಧರಿಸಿದೆ ಎಂದು ಹೇಳಿದ್ದಾರೆ.
ಬಾಂಗ್ಲಾ ದೇಶದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಾಂಗ್ಲಾದೇಶ ಮಧ್ಯಂತರ ಸರಕಾರದ ವರಿಷ್ಠ ಹಾಗೂ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರಿಗೆ ಬರೆದ ಪತ್ರದಲ್ಲಿ ಮೋದಿ ಅವರು ಈ ಸಂದೇಶವನ್ನು ನೀಡಿದ್ದಾರೆ.ಬಾಂಗ್ಲಾವು 1971ರಲ್ಲಿ ಪಾಕಿಸ್ತಾನದಿಂದ ವಿಮೋಚನೆಗೊಂಡು ಸ್ವತಂತ್ರ ರಾಷ್ಟ್ರವಾಗಿತ್ತು.
‘ನಮ್ಮ ಸಮಾನ ಇತಿಹಾಸ ಹಾಗೂ ತ್ಯಾಗಗಳಿಗೆ ಈ ದಿನವು ಒಂದು ಸಾಕ್ಷಿಯಾಗಿದ್ದು, ಇದು ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯ ತಳಹದಿಯಾಗಿದೆ’’ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ. ಬಾಂಗ್ಲಾದೇಶ ವಿಮೋಚನಾ ಸಮರವು ವಿವಿಧಕ್ಷೇತ್ರಗಳಲ್ಲಿ ಸಮೃದ್ಧಿಗೊಂಡಿರುವ ಉಭಯದೇಶಗಳ ನಡುವಿನ ಬಾಂಧವ್ಯಕ್ಕೆ ದಾರಿದೀಪವಾಗಿದ್ದು, ನಮ್ಮ ಜನತೆಗೆ ಪ್ರಯೋಜನಗಳನ್ನು ನೀಡಿದೆ ಎಂದರು.
ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಯ ಸಮಾನ ಆಶೋತ್ತರಗಳಿಂದ ಪ್ರೇರಿತವಾದ ಮತ್ತು ಪರಸ್ಪರರ ಹಿತಾಸಕ್ತಿಗಳು ಹಾಗೂ ಕಾಳಜಿಗಳನ್ನು ಆಧರಿಸಿದ ಉಭಯ ದೇಶಗಳ ಪಾಲುದಾರಿಕೆಯನ್ನು ಸುಧಾರಣೆಗೊಳಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
ಮೋದಿ ಅವರ ಪತ್ರವನ್ನು ಯೂನಸ್ ಅವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.